ಪೂರ್ಣಿಯಾ: ಬಿಹಾರದಲ್ಲಿ ಬಂದೂಕು ತೋರಿಸಿ ದರೋಡೆ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಲೇ ಇವೆ. ಶುಕ್ರವಾರ ಪೂರ್ಣಿಯಾದಲ್ಲಿರುವ ತನಿಷ್ಕ್ ಜ್ಯುವೆಲ್ಲರಿ ಶೋರೂಂ ಒಂದರಲ್ಲಿ ಬಂದೂಕು ತೋರಿಸಿ, ಹಾಡಹಗಲೇ ಕೋಟ್ಯಂತರ ರೂಪಾಯಿ ದರೋಡೆ ಮಾಡಿರುವ ಘಟನೆ ನಡೆದಿದೆ.
7 ದುಷ್ಕರ್ಮಿಗಳಿಂದ ಕೃತ್ಯ: ಪೂರ್ಣಿಯಾ ನಗರದ ಸಹಾಯಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 7 ಮಂದಿ ದುಷ್ಕರ್ಮಿಗಳು ದರೋಡೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆ ಕುರಿತು ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.
ಪೂರ್ಣಿಯಾ ಡಿಎಸ್ಪಿ ಪುಷ್ಕರ್ ಕುಮಾರ್ ಘಟನೆ ಬಗ್ಗೆ ಮಾಹಿತಿ ನೀಡಿದ್ದು, “ತನಿಷ್ಕ್ ಜ್ಯುವೆಲ್ಲರಿಯಲ್ಲಿ ದರೋಡೆ ನಡೆದಿರುವ ಬಗ್ಗೆ ಮಾಹಿತಿ ಬಂದ ಕೂಡಲೇ, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇವೆ. ಕೃತ್ಯದಲ್ಲಿ 5- 6 ಮಂದಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇದ್ದು, ತನಿಖೆ ಪ್ರಾರಂಭಿಸಿದ್ದೇವೆ. ದರೋಡೆಕೋರರು ತಮ್ಮ ಬ್ಯಾಗ್‌ನಲ್ಲಿ ಚಿನ್ನಾಭರಣಗಳನ್ನು ತುಂಬಿಕೊಂಡು ಪರಾರಿಯಾಗಿದ್ದಾರೆ” ಎಂದು ತಿಳಿಸಿದರು.
ಎರಡು ಬೈಕ್‌ಗಳಲ್ಲಿ ಬಂದಿದ್ದ ದುಷ್ಕರ್ಮಿಗಳು: ಮಾಹಿತಿ ಪ್ರಕಾರ, ಎರಡು ಬೈಕ್‌ಗಳಲ್ಲಿ 6 ಜನ ಕ್ರಿಮಿನಲ್‌ಗಳು ಬಂದಿದ್ದರು. ಒಬ್ಬ ನಡೆದುಕೊಂಡು ಬಂದು ಶೋರೂಂ ಒಳಹೋಗಿದ್ದಾನೆ. ವಜ್ರದ ಸೆಟ್‌ನಲ್ಲಿ ಅಪರಾಧಿಗಳು ತಮ್ಮ ಕೈಚಳಕ ತೋರಿಸಿದ್ದು, ಎರಡು ಕೋಟಿಗೂ ಹೆಚ್ಚು ಬೆಲೆ ಬಾಳುವ ಆಭರಣ ದರೋಡೆ ಆಗಿದೆ ಎನ್ನಲಾಗುತ್ತಿದೆ. ಅಧಿಕೃತ ಅಂಕಿ – ಅಂಶಗಳು ಇನ್ನೂ ಸ್ಪಷ್ಟವಾಗಿಲ್ಲ.