ನವದೆಹಲಿ: ಕರ್ನಾಟಕದಲ್ಲಿ ಮುಸ್ಲಿಮರಿಗೆ ಶೇ. 4 ರಷ್ಟು ಮೀಸಲಾತಿ ನೀಡಲು ಸಂವಿಧಾನ ಬದಲಾಯಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿರುವುದಾಗಿ ಆಡಳಿತಾರೂಢ ಬಿಜೆಪಿ ಸೋಮವಾರ ಸಂಸತ್ತಿನ ಉಭಯ ಸದನಗಳಲ್ಲಿ ಪ್ರಸ್ತಾಪಿಸಿದ್ದರಿಂದ ಗದ್ದಲ, ಕೋಲಾಹಲ ಉಂಟಾಯಿತು. ಲೋಕಸಭೆಯನ್ನು ಪದೇ ಪದೇ ಮುಂದೂಡಲಾಯಿತು.
ಬೆಳಗ್ಗೆ 11 ಗಂಟೆಗೆ ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಕರ್ನಾಟಕದಲ್ಲಿ ಸರ್ಕಾರಿ ಗುತ್ತಿಗೆ ಗಳಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ವಿಷಯವನ್ನು ಪ್ರಸ್ತಾಪಿಸಿದರು. ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ವಿಷಯ ಕುರಿತ ಗಮನ ಸೆಳೆಯಲು ಸಮಾಜವಾದಿ ಪಕ್ಷದ ಸದಸ್ಯರು ಫೋಸ್ಟರ್ ಪ್ರದರ್ಶಿಸುತ್ತಾ ಸ್ಪೀಕರ್ ಪೀಠದತ್ತ ಧಾವಿಸಿದರು.
ಎಸ್ ಪಿ ಸದಸ್ಯರು ಸದನದಲ್ಲಿ ಫೋಸ್ಟರ್ ಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್ ಓಂ ಬಿರ್ಲಾ, 12 ಗಂಟೆಗೆ ಕಲಾಪವನ್ನು ಮುಂದೂಡಿದರು. ಸದನ ಮತ್ತೆ ಸಮಾವೇಶಗೊಂಡಾಗ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಮುಸ್ಲಿಮರಿಗೆ ಶೇ. 4 ರಷ್ಟು ಮೀಸಲಾತಿ ಒದಗಿಸಲು ಅನುಕೂಲವಾಗುವಂತೆ ಸಂವಿಧಾನವನ್ನು ಬದಲಾಯಿಸುವುದಾಗಿ ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತಿರುವ ವ್ಯಕ್ತಿಯೊಬ್ಬರು ನೀಡಿರುವ ಹೇಳಿಕೆಯನ್ನು ಸ್ವೀಕಾರಾರ್ಹವಲ್ಲ ಎಂದು ಹೇಳಿದರು.