ಹಾಸನ, ಮೇ.14: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದು ಎನ್ನಲಾದ ವಿಡಿಯೋಕ್ಕೆ ಸಂಬಂಧಿಸಿದ ಸಂತ್ರಸ್ಥೆ ಮಹಿಳೆಯನ್ನು ಅಪಹರಿಸಿದ್ದ ಆರೋಪದ ಮೇಲೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಜೈಲು ಸೇರಿದ್ದರು. ಇಂದು(ಮೇ.14) ಜೈಲಿನಿಂದ ಬಿಡುಗಡೆಯಾಗಿದ್ದು, ಜೆಡಿಎಸ್ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಇದರ ಬೆನ್ನಲ್ಲೇ ನಾಳೆ (ಮೇ.15) ರೇವಣ್ಣ ಅವರು ಸ್ವಕ್ಷೇತ್ರ ಹೊಳೆನರಸೀಪುರಕ್ಕೆ ತೆರಳುವ ಸಾಧ್ಯತೆಯಿದ್ದು, ರೇವಣ್ಣ ಸ್ವಾಗತಕ್ಕೆ ಜೆಡಿಎಸ್ ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಗಡಿಯಲ್ಲೇ ಸ್ವಾಗತಕೋರುವುದಕ್ಕೆ ಭರ್ಜರಿ ತಯಾರಿ ನಡೆಸಿದ್ದಾರೆ.
ಇನ್ನು ರೇವಣ್ಣ ಜೈಲಿನಿಂದ ಬಿಡುಗಡೆ ಹಿನ್ನಲೆ ಮಂಕಾಗಿದ್ದ ದಳ ಕೋಟೆಯಲ್ಲಿ ಉತ್ಸಾಹ ಹೆಚ್ಚಿದೆ. ತಮ್ಮ ನಾಯಕನ ಸ್ಚಾಗತಕ್ಕೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಸಜ್ಜಾಗಿದ್ದಾರೆ. ಜೊತೆಗೆ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಹೊಸ ಹುಮ್ಮಸ್ಸು ಮೂಡಿದೆ. ಇಂದು ಬಿಡುಗಡೆಯಾಗಿ ಬೆಂಗಳೂರಿನ ಮನೆಗೆ ತೆರಳಿರುವ ರೇವಣ್ಣ ಅವರು, ನಾಳೆ(ಮೇ.15) ಹೊಳೆನರಸೀಪುರದ ಮನೆಗೆ ಆಗಮಿಸಿ, ಬಳಿಕ ಆರಾಧ್ಯ ದೇವಾಲಯಗಳಾದ ಹೊಳೆನರಸೀಪುರದ ಲಕ್ಷ್ಮಿನರಸಿಂಹ, ದೇವೇಗೌಡರ ಹುಟ್ಟೂರು ಹರದನಹಳ್ಳಿಯಲ್ಲಿರುವ ಮನೆ ದೇವರು ದೇವೇಶ್ವರ, ಮಾವಿನಕೆರೆಯ ಬೆಟ್ಟದ ರಂಗನಾಥನಿಗೆ ಪೂಜೆ ಸಲ್ಲಿಸುವ ಸಾಧ್ಯತೆಯಿದೆ.