ಇಂಡಿ: ಶಿಕ್ಷಕ ವೃತ್ತಿ ಬಹಳ ಪವಿತ್ರವಾದುದು. ಶಿಕ್ಷಕರು ತಮ್ಮ ಸೇವಾವಧಿಯಲ್ಲಿ ಗಳಿಸುವ ಜ್ಞಾನ ಮತ್ತು ಅನುಭವವನ್ನು ನಿವೃತ್ತಿಯ ನಂತರವು ಸಮಾಜಕ್ಕೆ ನೀಡಿ, ಸಮಾಜದ ಋಣ ತೀರಿಸಬೇಕು ಎಂದು ಬೆಳಗಾವಿ ವಿಭಾಗೀಯ ಕಚೇರಿಯ ಸಹಾಯಕ ನಿರ್ದೇಶಕ ರವೀಂದ್ರ ದ್ಯಾಬೇರಿ ಹೇಳಿದರು.
ಶುಕ್ರವಾರದಂದು ಪಟ್ಟಣದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ‘ಪ್ರಾಚಾರ್ಯ ಯು ಕೆ ರಜಪೂತ ಅವರ ಅಭಿನಂದನಾ ಹಾಗೂ ವಯೋನಿವೃತ್ತಿ ಸಮಾರಂಭ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಳಗಾವಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಚಿದಾನಂದ ಬಾಕೆ ಮಾತನಾಡಿ, ರಜಪೂತ ಅವರು ತಮ್ಮ ಕರ್ತವ್ಯದಲ್ಲಿ ನಿಷ್ಠೆ, ಪ್ರಾಮಾಣಿಕತೆಯೊಂದಿಗೆ ಸಂಸ್ಥೆಯ ಬಳಗದ ಜೊತೆಗೆ ಹೊಂದಾಣಿಕೆ, ಪ್ರೀತಿ-ವಿಶ್ವಾಸ ಉತ್ತಮ ಕರ್ತವ್ಯದೊಂದಿಗೆ ಸೇವೆ ಸಲ್ಲಿಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿ ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಜ್ಞಾನ ಮತ್ತು ಕೌಶಲ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವಿದ್ಯಾರ್ಥಿಗಳಲ್ಲಿ ಉತ್ತಮ ಶಿಕ್ಷಣ ಜೊತೆಗೆ ಶಿಸ್ತು- ಓದುವ ಹವ್ಯಾಸವನ್ನು ಮೂಡಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದ ರಜಪೂತ ಅವರು ವಿದ್ಯಾರ್ಥಿಗಳ ಮನಃ ಪರಿವರ್ತನೆ ಮಾಡುತ್ತಿದ್ದರು ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯ ಯು ಕೆ ರಜಪೂತ ಸನ್ಮಾನ ಸ್ವೀಕರಿಸಿ ಮಾತನಾಡಿ, ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ. ಯುವ ಪೀಳಿಗೆಯನ್ನು ಸುಸಂಸ್ಕೃತರನ್ನಾಗಿ ಮಾಡುವ ಗುರುತರ ಜವಾಬ್ದಾರಿ ಶಿಕ್ಷಕರದ್ದಾಗಿದೆ. ನನ್ನ ಸೇವಾವಧಿಯಲ್ಲಿ ಸಹಕಾರ ನೀಡಿದ ಸರ್ವಸಿಬ್ಬಂದಿಗಳಿಗೆ ಅಭಿನಂದನೆಗಳು ಎಂದು ಹೇಳಿದರು.
ಪ್ರಾಚಾರ್ಯರಾದ ಎಂ ಎ ಹೆಗಡ್ಯಾಳ,ಮಧು ಲಮಾಣಿ,
ಡಿ ಬಿ ಬಡಿಗೇರ ಮಾತನಾಡಿದರು. ಸಂಸ್ಥೆಯ ಪ್ರಾಚಾರ್ಯ ಕಾಂತಪ್ಪ ಕನ್ನಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು, ಸಿಬ್ಬಂದಿ ವರ್ಗದವರು ಯು ಕೆ ರಜಪೂತ ಅವರನ್ನು ಸನ್ಮಾನಿಸಿದರು.
ಸಂಸ್ಥೆಯ ಉಪನ್ಯಾಸಕರಾದ ಗಂಗಾಧರ ಭಾಗೆಳ್ಳಿ,
ರಮೇಶ ಮೇತ್ರಿ ಕಾರ್ಯಕ್ರಮ ನಿರ್ವಹಿಸಿದರು. ಸಂತೋಷ ಜಾಧವ, ಭೀಮಾಶಂಕರ ಶಿವೂರ, ಪ್ರೇಮಾನಂದ ದೇಸಾಯಿ, ರವಿ ಹಾದಿಮನಿ, ಅಬ್ದುಲ್ ಫಿರಜಾದೆ, ರವಿ ಪಡತಪ್ಪನವರ, ರೇಷ್ಮಾಗೌoಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.