ಬಳ್ಳಾರಿ,ಜ.31- ನಗರದ ವಿವಿಧೆಡೆ ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಜಂಟಿ ಸಹಕಾರದೊಂದಿಗೆ ಶುಕ್ರವಾರ ದಾಳಿ ನಡೆಸಿ ಇಬ್ಬರು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮೌನೇಶ್ ಅವರು ತಿಳಿಸಿದ್ದಾರೆ.
ಪ್ಯಾನ್-ಇಂಡಿಯಾ ರಕ್ಷಣೆ ಮತ್ತು ಪುನರ್ವಸತಿ ಅಭಿಯಾನ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಹೊಸಮನೆ ಅವರ ಅಧ್ಯಕ್ಷತೆಯಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಟಾಸ್ಕ್ಪೋರ್ಸ್ ಸಮಿತಿ ಸಭೆ ನಡೆಸಿ ಈ ದಾಳಿ ಕೈಗೊಳ್ಳಲಾಗಿದೆ.
ನಗರದ ದುರ್ಗಮ್ಮ ದೇವಸ್ಥಾನದ ಹತ್ತಿರದ ಕಪ್ಪಗಲ್ಲು ರಸ್ತೆ, ತಾಳೂರು ರಸ್ತೆ, ರೇಣುಕ ನಗರ, ದುರ್ಗಮ್ಮ ಗುಡಿ ಹತ್ತಿರದ ವಿವಿಧ ಸ್ಥಳಗಳಲ್ಲಿರುವ ಗ್ಯಾರೇಜ್, ಮೆಕ್ಯಾನಿಕ್ ಶಾಪ್, ಬೇಕರಿ ಇತ್ಯಾದಿ ಉದ್ದಿಮೆಗಳ ಮೇಲೆ ಟಾಸ್ಕ್ ಪೋರ್ಸ್ ಸಮಿತಿ ಮುಖಾಂತರ ಭೇಟಿ ನೀಡಿದ ಸಂದರ್ಭದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ವಶಕ್ಕೆ ಪಡೆದುಕೊಂಡು ಮಕ್ಕಳ ಹೇಳಿಕೆಗಳನ್ನು ಸ್ಥಳದಲ್ಲಿಯೇ ಪಡೆದುಕೊಂಡು ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಶಿಕ್ಷಣ ಇಲಾಖೆಗೆ ಒಪ್ಪಿಸಲಾಗಿದೆ.

ಉದ್ದಿಮೆಗಳ ಮಾಲೀಕರಿಗೆ ಕರಪತ್ರ ಹಾಗೂ ಪೋಸ್ಟರ್ ವಿತರಿಸಿ ಜಾಗೃತಿ ಮೂಡಿಸಲಾಯಿತು.
ಈ ಟಾಸ್ಕ್ಪೋರ್ಸ್ ಸಮಿತಿಯಲ್ಲಿ ಬಳ್ಳಾರಿ ತಾಲ್ಲೂಕು ಗ್ರೇಡ್-2 ತಹಶೀಲ್ದಾರ ವಿನಾಯಕ, ಕಾರ್ಮಿಕ ನಿರೀಕ್ಷಕರಾದ 1ನೇ ವೃತ್ತದ ರಮೇಶ್, 2 ನೇ ವೃತ್ತದ ಪರಶುರಾಮ್, ಆರೋಗ್ಯ ಇಲಾಖೆಯ ಮುಸ್ತಾಕ್ ಅಹಮದ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಪ್ರಶಾಂತ್ ಕುಮಾರ್, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಹೊನ್ನೂರಪ್ಪ ಮತ್ತು ಉಮೇಶ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಚಂದ್ರಕಲಾ ಮತ್ತು ರೀಚ್ ಸಂಸ್ಥೆಯ ಸಂಯೋಜಿಕಿ ಬಸಮ್ಮ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.


