ಬಳ್ಳಾರಿ, ಮಾ.26.: ಬಳ್ಳಾರಿ ನಗರದಲ್ಲಿ ತೀವ್ರ ಬಿಸಿಲಿನ ನಡುವಿನಲ್ಲಿ ಪ್ರಯಾಣಿಕರು ಎದುರಿಸುತ್ತಿರುವ ಸಂಕಷ್ಟವನ್ನು ಗಮನಿಸಿ ನಗರದಲ್ಲಿ ಎಸಿ ಬಸ್ಗಳನ್ನು ಸಂಚರಿಸಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಕಾರ್ಮಿಕ ಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷ ಎಸ್. ದೇವಾನಂದ್ ಕುಮಾರ್ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರಿಗೆ ಸಲ್ಲಿಸಲಾದ ಮನವಿ ಪತ್ರದಲ್ಲಿ, ಬೇಸಿಗೆ ಅವಧಿಯಲ್ಲಿ ಬಳ್ಳಾರಿಯಲ್ಲಿ ಉಷ್ಣಾಂಶವು 40 ರಿಂದ 45 ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆಯಾಗುತ್ತಿರುವುದರಿಂದ ಸಾರ್ವಜನಿಕರು ತೀವ್ರ ಬಿಸಿಲಿನ ಧಗೆಯನ್ನು ಎದುರಿಸುತ್ತಿದ್ದಾರೆ ಎಂದು ವಿವರಿಸಲಾಗಿದೆ. ಇದರಿಂದ ಪ್ರಯಾಣಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದ್ದು, ಸಾರ್ವಜನಿಕರಿಗೆ ಸಂಚಾರ ಮಾಡಲು ಕಷ್ಟಕರವಾಗುತ್ತಿದೆ ಎಂದು ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಬಳ್ಳಾರಿ ನಗರ ಸಾರಿಗೆ ವ್ಯವಸ್ಥೆಯಲ್ಲಿ ಹವಾ ನಿಯಂತ್ರಿತ (ಏರ್ ಕಂಡೀಷನ್) ಬಸ್ಗಳನ್ನು ಆರಂಭಿಸಿ ಪ್ರಯಾಣಿಕರಿಗೆ ಉತ್ತಮ ಪ್ರಯಾಣ ಸೌಲಭ್ಯ ಒದಗಿಸಬೇಕೆಂದು ಕಾರ್ಮಿಕ ಶಕ್ತಿ ಸಂಘಟನೆಯು ಸರ್ಕಾರವನ್ನು ಆಗ್ರಹಿಸಿದೆ.
ಈ ಮನವಿ ನೀಡಿದ ಸಂದರ್ಭದಲ್ಲಿ ಕಾರ್ಮಿಕ ಶಕ್ತಿ ಸಂಘಟನೆಯ ಹೊನ್ನಪ್ಪ, ಆದಿ ಬಸಪ್ಪ, ದೇವೇಂದ್ರ ಹಾಗೂ ಕೆ.ಎ. ರಾಜೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


