ಹುಬ್ಬಳ್ಳಿ, ಮಾರ್ಚ್ 27: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಲಿಂಗಾಯತ ಮಠಾಧೀಶರಿಗೆ ಅಗೌರವ ತೋರಿದ್ದಾರೆ. ಧಾರವಾಡ ಕ್ಷೇತ್ರದಲ್ಲಿ ಲಿಂಗಾಯತ ಮತಗಳ ವಿಭಜನೆ ಆಗುವ ಸಾಧ್ಯತೆ ಇದೆ. ಜೋಶಿಯವರಿಂದ ಕೆಲ ವರ್ಗದವರಿಗೆ ತೊಂದರೆ ಆಗಿದೆ.
ಮುಖ್ಯವಾಗಿ ಲಿಂಗಾಯತ ಬಿಎಸ್ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಇಳಿಯಲು ಕಾರಣರಾದ ಜೋಶಿ ಅವರನ್ನು ಕ್ಷೇತ್ರದಿಂದ ಬದಲಾಯಿಸಬೇಕು ಎಂದು ಶ್ರೀ ಶಿರಹಟ್ಟಿ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಧಾರವಾಡಕ್ಕೆ ಬಿಜೆಪಿಯಿಂದ ಪ್ರಹ್ಲಾದ್ ಜೋಶಿಯವರು ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಅವರ ವಿರುದ್ಧ ಲಿಂಗಾಯತ ಮಠಾಧೀಶರಾದ ದಿಂಗಾಲೇಶ್ವರ ಶ್ರೀಗಳು ಪಕ್ಷೇತರವಾಗಿ ನಿಲ್ಲುತ್ತಾರೆ ಎನ್ನಲಾಗಿದೆ. ಧಾರವಾಡ ಕ್ಷೇತ್ರದಿಂದ ಜೋಶಿ ಬದಲಾವಣೆಗೆ ಸ್ಪಂದಿಸದಿದ್ದರೆ ಶ್ರೀಗಳು ಸ್ಪರ್ಧಿಸಬೇಕೋ ಬೇಡವೋ ಎಂದು ನಿರ್ಧರಿಸಲು ಇಂದು ಬುಧವಾರ ಹುಬ್ಬಳ್ಳಿ ಶ್ರೀ ಮೂರು ಸಾವಿರ ಮಠದಲ್ಲಿ ಸ್ವಾಮೀಜಿಗಳ ಸಭೆ ನಡೆಯಿತು. ಸಭೆಯಲ್ಲಿ ಹುಬ್ಬಳ್ಳಿಯಲ್ಲಿ ಮೂರು ಸಾವಿರ ಮಠದ ಮೂಜಗು ಸ್ವಾಮೀಜಿ, ದಿಂಗಾಲೇಶ್ವರ ಸ್ವಾಮೀಜಿ, ಒಂದಷ್ಟು ಕಾರ್ಯಕರ್ತರು, ಮುಖಂಡರು ಇದ್ದರು. ಸಭೆಯಲ್ಲಿ ದಿಂಗಾಲೇಶ್ವರ ಸ್ವಾಮೀಜಿಯವರು ಧಾರ್ಮಿಕ ಕಾರ್ಯ ಮುಂದುವರೆಸಬೇಕು ಎಂಬ ನೀರ್ಣಯಕ್ಕೆ ಬರಲಾಗಿದೆ.
ಇದರೊಂದಿಗೆ ಪ್ರಹ್ಲಾದ್ ಜೋಶಿ ಅವನ್ನು ಕ್ಷೇತ್ರದಿಂದ ಬದಲಾಯಿಸಬೇಕು. ಈ ನಿಟ್ಟಿನಲ್ಲಿ ಗುಡುವು ನೀಡಿರುವ ಸ್ವಾಮೀಜಿಗಳು, ಬಿಜೆಪಿ ವರಿಷ್ಠರಿಗೆ ಮನವಿ ಮಾಡಲಿದ್ದಾರೆ. ಮನವಿ ಪುರಸ್ಕರಿಸದಿದ್ದರೆ, ಏಪ್ರಿಲ್ 2ರಂದು ಮತ್ತೆ ಸಭೆ ಸೇರಿ ಪಕ್ಷೇತರ ಅಭ್ಯರ್ಥಿಯಾಗಿ ಶ್ರೀಗಳನ್ನು ಕಣಕ್ಕಿಳಿಸಬೇಕೋ, ಬೇಡವೋ ಎಂದು ನಿರ್ಧರಿಸಲು ಸಭೆಯಲ್ಲಿ ಶ್ರೀಗಳು ನಿರ್ಧರಿಸಿದ್ದಾರೆ.
ಇದೇ ವೇಳೆ ಮಾತನಾಡಿದ, ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಅವರು, ಲಿಂಗಾಯತ ನಾಯಕ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ್ದು ಪ್ರಹ್ಲಾದ್ ಜೋಶಿ ಎಂದು ಅವರು ಗಂಭೀರ ಆರೋಪ ಮಾಡಿದರು. ಜೋಶಿಯವರು ತಾವೇ ಮುಖ್ಯಮಂತ್ರಿ ಆಗಬೇಕೆಂದು ಜಾಕೆಟ್ ಹೊಲಿಸಿದ್ದರು. ಆದರೆ ಮಠಾಧೀಶರ ಹೋರಾಟದಿಂದಾಗಿ ಅವರ ಜಾಕೆಟ್ ಪಾಕೆಟ್ ಸೇರಿತು. ನಾವು ಯಾರ ಒತ್ತಡಕ್ಕೂ ಒಳಗಾಗುವ ಸ್ವಾಮೀಜಿಗಳಲ್ಲ. ಎರಡನೆಯ ತಾರೀಕಿನ ನಂತರ ಕಾಯ್ದು ನೋಡಿ ಎಂದು ಹೇಳಿದರು. ಅವರ ಈ ಮಾತಿಗೆ ಸಭೆಯಲ್ಲಿದ್ದವರೆಲ್ಲಿ ಕೈ ಎತ್ತಿ ದಿಂಗಾಲೇಶ್ವರ ಸ್ವಾಮೀಜಿಗೆ ಬೆಂಬಲ ಸೂಚಿಸಿದ ದೃಶ್ಯ ಕಂಡು ಬಂತು.
ಮಾಜಿ ಮುಖ್ಯಮಂತ್ರಿಗಳಿಗೆ ಬೇರೆ ಕ್ಷೇತ್ರ ಕೊಟ್ಟಂತೆ ಕೇಂದ್ರ ಸಚಿವರಿಗೂ ಕ್ಷೇತ್ರ ಬದಲಾವಣೆ ಮಾಡಬೇಕು. ಈ ಕುರಿತು ಸ್ವಾಮೀಜಿಗಳ ನಿಯೋಗದಿಂದ ಬಿಜೆಪಿ ವರಿಷ್ಠರಿಗೆ ಮನವಿ ಸಲ್ಲಿಸಲಾಗುವುದು ಎಂದು ವಿವರಿಸಿದರು. ಲಿಂಗಾಯತರ ಕ್ಷೇತ್ರದಲ್ಲಿ ಬ್ರಾಹ್ಮಣರು ಅನಿವಾರ್ಯವಾದರೆ. ಬ್ರಾಹ್ಮಣರು ಪ್ರಭಲವಾಗಿರುವ ಕ್ಷೇತ್ರದಲ್ಲಿ ಲಿಂಗಾಯತನ್ನು ನಿಲ್ಲಿಸಿ ಗೆಲ್ಲಿಸಬೇಕು. ಪ್ರಹ್ಲಾದ್ ಜೋಶಿಯವರು ಸೇಡಿನ ರಾಜಕೀಯ ಮಾಡಿದ್ದಾರೆ. ಅವರಿಂದಾಗಿ ಬೇರೆಬೇರೆ ವರ್ಗದ ಜನರು ತುಳಿತಕ್ಕೆ ಒಳಗಾಗಿದ್ದಾರೆ. ಐಟಿ, ಇಡಿ ಬೆದರಿಕೆ ಹಾಕಿ ದಾಸ್ಯತ್ವಕ್ಕೆ ದಾರಿ ಮಾಡಿದ್ದಾರೆ. ಹಿಂಬಾಲಕರನ್ನು ಎಲ್ಲೆಡೆ ಇಟ್ಟು ಭಯದ ವಾತಾವರಣ ಸೃಷ್ಟಿಸಿದ್ದಾರೆ ಎಂದು ಶ್ರೀಗಳು ಗಂಭೀರ ಆರೋಪ ಮಾಡಿದರು.
ಸಂಸದರಿಗೆ ಫೋನ್ ಮಾಡಿದರೆ ಲಿಂಗಾಯತ ಮುಖಂಡರಿಗೆ ಫೋನ್ ಮಾಡಿ ಎಂದು ಹೇಳಿದ್ದರು. ಈ ಮೂಲಕ ಪ್ರಹ್ಲಾದ್ ಜೋಶಿಯವರ ಸಹೋದರ ಗೋವಿಂದ ಜೋಶಿಯವರು ನನ್ನ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ದೂರಿದರು. ಧಾರ್ಮಿಕವಾಗಿ ವೀರಶೈವ ಲಿಂಗಾಯತರ ಅವನತಿ ಆಗುತ್ತಿದೆ ಎಂಬುದರ ಕುರಿತು ಸಭೆಯಲ್ಲಿ ಸ್ಪಷ್ಟ ತೀರ್ಮಾನಕ್ಕೆ ಬರಲಾಗಿದೆ.
ಸಾಮಾಜಿಕವಾಗಿ ಸೌಲಭ್ಯಗಳಿಂದ ಸಮಾಜ ವಂಚಿತವಾಗಿದೆ. ಈ ಕುರಿತು ಮುಖಂಡರು ಚರ್ಚಿಸಿದ್ದಾರೆ. ಸಮಾಜದ ಮುಖಂಡರಿಗೆ ಸಾಮಾಜಿಕ, ರಾಜಕೀಯಕ್ಕೆ ಪೆಟ್ಟು ಬಿದ್ದಾಗ ಸ್ವಾಮೀಜಿಗಳು ಮಾತಾಡಬೇಕು ಎಂಬ ನಿರ್ಣಯ ಕೈಗೊಂಡಿದ್ದೇವೆ. ಅದಕ್ಕಾಗಿಯೇ ಉತ್ತರ ಭಾರತದಂತೆ ದಕ್ಷಿಣ ಭಾರತದ ಸ್ವಾಮೀಜಿಗಳು ಚುನಾವಣೆಗೆ ನಿಲ್ಲಬೇಕು ಎಂದು ತಿರ್ಮಾನಿಸಿದ್ದೇವೆ ಎಂದರು.
ಪ್ರಹ್ಲಾದ್ ಜೋಶಿಯವರು ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ಮಾಡಿದ್ದಾರೆ ಎಂದು ಕೆಲವು ಘಟನೆಗಳನ್ನು ಅವರು ನೆನಪಿಸಿದ್ದಾರೆ. ಮಗಳ ಮದುವೆಗೆ ಹೋದರೆ ಅವಮಾನಿಸಿ ಕಳಿಸಿದ್ದಾರೆ. ಸ್ವಾಮೀಜಿಗಳಿಗೆ ಎರಡು ಸಾವಿರ ಕೊಟ್ಟು ಕಳಿಸಿರುವ ಅವರಿಗೆ ಹಣ, ಅಧಿಕಾರದ ಮದ ಏರಿದೆ. ಒಂದಂತು ನೆನಪಿರಲಿ, ಮಠಾಧೀಶರು ಯಾವ ಪಕ್ಷದ ವಿರೋಧಿಗಳೂ ಅಲ್ಲ, ಅಭಿಮಾನಿಗಳೂ ಅಲ್ಲ. ಪ್ರಹ್ಲಾದ್ ಜೋಶಿಯ ವ್ಯಕ್ತಿತ್ವದ ಕಾರಣ ಅವರನ್ನು ಕೆಳಗೆ ಇಳಿಸುವ ತೀರ್ಮಾನಕ್ಕೆ ಬಂದಿದ್ದೇವೆ. ಅವರನ್ನು ಧಾರವಾಡದಿಂದ ಬೇರೆ ಕ್ಷೇತ್ರಕ್ಕೆ ಇದೇ ತಿಂಗಳ ಮಾರ್ಚ್ 31ರೊಳಗೆ ಕಳಿಸಬೇಕು. ಇಲ್ಲವಾದರೆ. ಇಲ್ಲದಿದ್ದರೆ ಎಪ್ರಿಲ್ 2ರಂದು ಸ್ವಾಮೀಜಿಗಳು ಮತ್ತೆ ಸೇರಿ ನಮ್ಮದೇ ಆದ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.