ದಾವಣಗೆರೆ: “ಯತ್ನಾಳ್ ಹಿಂದೂ ಹುಲಿ ಅಲ್ಲ, ನಕಲಿ ಹಿಂದೂ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಹೊಸ ಪಕ್ಷ ಕಟ್ಟಿ ಗೆದ್ದು ಬಂದರೆ, ಹಿಂದೂ ಹುಲಿಗೆ ನಾವೇ ಸನ್ಮಾನ ಮಾಡುತ್ತೇವೆ” ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಬಿಜೆಪಿ ಪಕ್ಷದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು.
ದಾವಣಗೆರೆ ನಗರದ ಹಳೇ ಪ್ರವಾಸಿ ಮಂದಿರ ಬಳಿ ಶಾಸಕ ಯತ್ನಾಳ್ ಹೊಸ ಪಕ್ಷ ಕಟ್ಟುವ ವಿಚಾರವಾಗಿ ಪ್ರತಿಕ್ರಿಯಿಸಿದರು.
“ಯತ್ನಾಳ್ ಪಕ್ಷ ಕಟ್ಟಿದ್ರೆ ಸಂತೋಷ, ಸ್ವಾಗತ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಟೀಕೆ ಮಾಡಿದ್ರೆ ಸಿಎಂ ಆಗುವ ಬಗ್ಗೆ ಹಗಲು ಕನಸು ಕಾಣುತ್ತಿದ್ದಾರೆ. ಸರ್ವಾಧಿಕಾರಿ ಧೋರಣೆ ಬಿಡಬೇಕು. ಸ್ವಯಂಘೋಷಿತ ನಾಯಕರಾಗಬಾರದು, ಜನ ಮೆಚ್ಚಿದ ನಾಯಕರಾಗಬೇಕು. ಭಾರತೀಯ ಜನತಾ ಪಕ್ಷದ ಚಿಹ್ನೆಯಡಿಯಲ್ಲಿ ನಿಂತು ಗೆದ್ದಿದ್ದೀರಿ. ನಿಮಗೆ ನಿಜವಾಗಿಯೂ ವರ್ಚಸ್ಸು ಇದ್ದರೆ, ನೀವು ನಿಜವಾಗಿಯೂ ಹಿಂದುತ್ವವಾದಿಯಾಗಿದ್ದರೆ, ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಮರು ಚುನಾವಣೆಯಲ್ಲಿ ಗೆದ್ದು ಬಂದರೆ, ನಾವು ನಿಮ್ಮನ್ನು ಅಭಿನಂದಿಸುತ್ತೇವೆ. ಸನ್ಮಾನ ಮಾಡುತ್ತೇವೆ” ಎಂದು ಸವಾಲು ಹಾಕಿದರು.