ಬಳ್ಳಾರಿ, ಜು.22.. ಬಹು ದಿನಗಳಿಂದ ಸಾರ್ವಜನಿಕರ ಬೇಡಿಕೆಯಾಗಿದ್ದ ಪೊಲೀಸ್ ಠಾಣೆಗಳ ಸರಹದ್ದು ಮರು ಗುರುತಿಸುವಿಕೆಯನ್ನು ಅಂತಿಮಗೊಳಿಸಿ ಸರ್ಕಾರ ಅಧಿಕೃತವಾಗಿ ಕರ್ನಾಟಕ ರಾಜ್ಯಪತ್ರದ ಮೂಲಕ ಅಧಿಸೂಚನೆ ಹೊರಡಿಸಿದೆ.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹಲವು ಪ್ರದೇಶಗಳು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಪೊಲೀಸ್ ಠಾಣೆಗಳ ಸರಹದ್ದಿನಲ್ಲಿದ್ದವು. ಗ್ರಾಮೀಣ ಠಾಣೆ, ಕೌಲಬಜಾರ್ ಠಾಣೆ ಹಾಗೂ ವಿವಿಧ ಠಾಣೆಗಳ ವ್ಯಾಪ್ತಿಗೆ ನಗರ ಕ್ಷೇತ್ರದ ಪ್ರದೇಶಗಳು ಸೇರಿದ್ದರಿಂದ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಕೆಲಸಗಳಿಗಾಗಿ ಸಾರ್ವಜನಿಕರು ಪರದಾಡುವಂತಾಗಿತ್ತು.
ಗ್ರಾಮೀಣ ಪೊಲೀಸ್ ವಿಭಾಗಕ್ಕೆ ಸಂಬಂಧಿಸಿ ದಿನನಿತ್ಯದ ಬದುಕಿನ ಇಲಾಖೆಯ ಕೆಲಸಗಳು, ವ್ಯಾಜ್ಯಗಳು, ದೂರುಗಳು ಇದ್ದಾಗ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಬೇಕೆಂದರೆ ಸಾರ್ವಜನಿಕರು ಬಳ್ಳಾರಿ ನಗರದಿಂದ ಸಿರುಗುಪ್ಪಾಕ್ಕೆ ಹೋಗಬೇಕಾದ ಸ್ಥಿತಿ ಇತ್ತು.
ಈ ಎಲ್ಲ ವಿಷಯಗಳನ್ನು ಮನಗಂಡ ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ಕಳೆದ ಹಲವು ತಿಂಗಳುಗಳಿಂದ ನಿರಂತರವಾಗಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆಸಿ, ಅವೈಜ್ಞಾನಿಕವಾಗಿ ಇದ್ದ ಪೊಲೀಸ್ ಠಾಣೆಗಳ ಸರಹದ್ದುಗಳ ಮರು ಸೇರ್ಪಡೆ ಕಾರ್ಯವನ್ನು ಸಾಕಾರಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ.
ತಮ್ಮ ಮನವಿಗೆ ಸ್ಪಂದಿಸಿ, ಪೊಲೀಸ್ ಠಾಣೆಗಳ ಸರಹದ್ದು ಮರು ಸೇರ್ಪಡೆಗೊಳಿಸಲು ಪೊಲೀಸ್ ಇಲಾಖೆಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಶಾಸಕ ನಾರಾ ಭರತ್ ರೆಡ್ಡಿ ಸಾರ್ವಜನಿಕರ ಪರವಾಗಿ ಧನ್ಯವಾದ ಸಲ್ಲಿಸಿದ್ದಾರೆ.