ಬೆಂಗಳೂರು,ಮಾ, 26: ಆಧುನಿಕ ತಂತ್ರಜ್ಞಾನದ ಜೊತೆಗೆ ಉದ್ಯೋಗ ಅವಕಾಶಗಳ ಅಗತ್ಯತೆಗಳನ್ನು ಅರಿತು ಮಾಧ್ಯಮ ಶಿಕ್ಷಣದ ಮರುವಿನ್ಯಾಸ ರೂಪಿಸುವ ಅನಿವಾರ್ಯತೆ ಇದೆ ಎಂದು ಕರ್ನಾಟಕ ರಾಜ್ಯ ಪತ್ರಿಕೋದ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಹಾಗೂ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಉನ್ನತ ಶಿಕ್ಷಣ ಕೌನ್ಸೆಲ್ ಮತ್ತು ಪತ್ರಿಕೋದ್ಯಮ ಅಧ್ಯಾಪಕರ ಸಂಘದ ಆಶ್ರಯದಲ್ಲಿ ಭಾನುವಾರ ‘ಮಾಧ್ಯಮ ಶಿಕ್ಷಣದ ಪಠ್ಯಕ್ರಮದ ಮರುವಿನ್ಯಾಸ’ ಕುರಿತು ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಾಧ್ಯಮ ಕ್ಷೇತ್ರದ ಮೇಲೆ ತಂತ್ರಜ್ಞಾನದ ಪ್ರಭಾವ ಹೆಚ್ಚಾಗಿದೆ. ಓದುಗರ ಆಸಕ್ತಿಗೆ ತಕ್ಕಂತೆ ಉದ್ಯೋಗದ ನಿರೀಕ್ಷೆಗಳೂ ಬದಲಾಗುತ್ತಿವೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮಾಧ್ಯಮ ಶಿಕ್ಷಣದ ಪಠ್ಯಕ್ರಮ, ಪ್ರಾಯೋಗಿಕ ಶಿಕ್ಷಣವೂ ಪರಿವರ್ತನೆ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಮಾಧ್ಯಮ ಮತ್ತು ಪತ್ರಿಕೋದ್ಯಮ ಶಿಕ್ಷಣ ನೀಡುವ ಸಂಸ್ಥೆಗಳು ಪರಸ್ಪರ ಸಹಯೋಗದಲ್ಲಿ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದರು.
ಪ್ರಸ್ತುತ ಮಾಧ್ಯಮದಲ್ಲಿ ಡೇಟಾ ಅನಲೈಸಿಸ್, ಆಗ್ಮೆಂಟೆಡ್ ರಿಯಾಲಿಟಿ, ವರ್ಚುವಲ್ ರಿಯಾಲಿಟಿ, ಕೃತಕ ಬುದ್ಧಿಮತ್ತೆ, ಬ್ಲಾಕ್‌ಚೈನ್ ಸೇರಿದಂತೆ ಹಲವು ಡಿಜಿಟಲ್ ತಂತ್ರಜ್ಞಾನಗಳು ಬಳಕೆಯಾಗುತ್ತಿದೆ. ಪಾರಂಪರಿಕ ಮಾಧ್ಯಮದ ಜೊತೆಗೆ ಸಾಮಾಜಿಕ ಮಾಧ್ಯಮಗಳು ಮುನ್ನೆಲೆಗೆ ಬಂದಿವೆ. ಅವಶ್ಯಕತೆ, ಅಗತ್ಯಗಳನ್ನು ಅರಿತು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಮಾಧ್ಯಮ ಶಿಕ್ಷಣ ಶಿಕ್ಷಕರೂ ಹೊಸ ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕಾಗಿದೆ ಎಂದು ಹೇಳಿದರು.
ಮಾಧ್ಯಮ ಶಿಕ್ಷಣವು ಅಂತರಶಿಸ್ತೀಯ ವಿಷಯಗಳ ಆಯ್ಕೆಗೆ ಗಮನ ನೀಡಬೇಕಾಗಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಮಾಧ್ಯಮದ ವಿದ್ಯಾರ್ಥಿಗಳು ಅವಕಾಶ ಪಡೆಯಲು ಸಾಧ್ಯವಾಗುವಂತೆ ಪಠ್ಯಕ್ರಮ ರೂಪಿಸಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ಪತ್ರಿಕೋದ್ಯಮ ಕೋರ್ಸ್ಗಳನ್ನು ಆರಂಭಿಸಿ, ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಆದ್ಯತೆ ನೀಡಬೇಕು. ಇದಕ್ಕೆ ಅಧ್ಯಾಪಕರ ಸ್ವಯಂ ಆಸಕ್ತಿಯೂ ಬೇಕಾಗಿದೆ ಎಂದು ಸಲಹೆ ನೀಡಿದರು.
ಪಿಯುಸಿ ಮತ್ತು ಕಾಲೇಜು ಹಂತಗಳಿAದಲೇ ಮಾಧ್ಯಮ ಶಿಕ್ಷಣವನ್ನು ಅಳವಡಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ. ಸಂಘಟನೆಯ ಮೂಲಕ ಮುಂದಿನ ದಿನಗಳಲ್ಲಿ ಈ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಖಾಸಗಿ ಸಂಸ್ಥೆಗಳ ಮಾದರಿಯಲ್ಲಿ ಸರ್ಕಾರದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳೂ ತಮ್ಮ ಕಾರ್ಯಶೈಲಿಯನ್ನು ಉನ್ನತೀಕರಿಸಿಕೊಳ್ಳಬೇಕಾಗಿದೆ. ಮಾಧ್ಯಮ ಶಿಕ್ಷಣಕ್ಕೆ ಎದುರಾಗುತ್ತಿರುವ ಸಮಸ್ಯೆಯನ್ನು ಸರ್ಕಾರದ ಮುಂದಿಡುವ ಆಲೋಚನೆ ಬಹಳ ಹಿಂದಿನಿAದ ನಡೆಯುತ್ತಿದ್ದೂ, ಹೊಸ ಪೀಳಿಗೆಯ ಅಧ್ಯಾಪಕರು ವೈಯಕ್ತಿಕ ಬೆಳವಣಿಗೆಯ ಜೊತೆಗೆ ಸಂವಹನ ಮತ್ತು ಮಾಧ್ಯಮ ಕ್ಷೇತ್ರದ ಅಭಿವೃದ್ದಿಗೂ ಒತ್ತು ನೀಡಬೇಕು ಎಂದು ತಿಳಿಸಿದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಮಾತನಾಡಿ, ನೂತನ ರಾಷ್ಟಿçÃಯ ಶಿಕ್ಷಣ ನೀತಿ ಮತ್ತು ರಾಜ್ಯ ಸರ್ಕಾರ ತರಲು ಯೋಚಿಸುತ್ತಿರುವ ರಾಜ್ಯ ಶಿಕ್ಷಣ ನೀತಿಯಲ್ಲಿ ಯಾವುದೇ ನೀತಿ ಅನುಷ್ಠಾನಕ್ಕೆ ಬಂದರೂ ವೃತ್ತಿ ಮತ್ತು ಅವಕಾಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ನುಡಿದರು.
ಪ್ರಸ್ತುತ ಮಾಧ್ಯಮ ಶಿಕ್ಷಣ ಹಾಗೂ ಅಧ್ಯಾಪಕರಲ್ಲಿ ಮಾಧ್ಯಮ ಪಠ್ಯ ಮತ್ತು ಉದ್ಯೋಗದ ಕುರಿತಾಗಿರುವ ಚಿಂತನ ಮಂಥನ ಕಾರ್ಯಕ್ರಮವಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಬದಲಾವಣೆಯನ್ನು ಗುರುತಿಸಿ, ನಿರಂತರ ಕಲಿಕೆಗೆ ಅವಕಾಶ ಒದಗಿಸುವುದು ಮುಖ್ಯ. ಜೊತೆಗೆ ಸಂಘಟನೆಯನ್ನು ಬಲಪಡಿಸಲು ಸಾಧ್ಯವಾಗುವುದು ಎಂದರು.
ಪಾಠ ಮಾಡುವುದಕ್ಕೆ ಅಧ್ಯಾಪಕರು ಸೀಮಿತವಾಗದೆ ಮಾಧ್ಯಮ ಶಿಕ್ಷಣಕ್ಕೆ ಅಗತ್ಯವಿರುವ ಪಠ್ಯಪುಸ್ತಕ ಸಿದ್ಧಪಡಿಸಲು ಆದ್ಯತೆ ನೀಡಬೇಕು. ಪತ್ರಿಕೋದ್ಯಮಕ್ಕೆ ಪ್ರತ್ಯೇಕ ಪಠ್ಯಕ್ರಮವಿದ್ದರೆ ವಿದ್ಯಾರ್ಥಿಗಳ ಕಲಿಕೆಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.
ಹಿರಿಯ ಪ್ರಾಧ್ಯಾಪಕರಾದ ಪ್ರೊ.ಪುಟ್ಟಸ್ವಾಮಿ, ಪ್ರೊ.ಓಂಕಾರಗೌಡ ಕಾಕಡೆ, ಪ್ರೊ.ಶೈಲಶ್ರೀ, ಪ್ರೊ.ಮಮತಾ, ಪ್ರೊ.ಸ್ವಪ್ನಾ, ಪ್ರೊ.ಚಂದೂನವರ, ಪ್ರೊ.ತೇಜಸ್ವಿ ನವಿಲೂರು, ಪ್ರೊ.ಸತೀಶಕುಮಾರ, ಪ್ರೊ.ಶಿವಕುಮಾರ ಕಣಸೋಗಿ, ಡಾ.ಭಾಸ್ಕರ್ ಹೆಗಡೆ, ಡಾ.ವಾಹಿನಿ, ಡಾ.ರಾಜೇಶ್ವರಿ, ಡಾ.ಬಿ.ಟಿ.ಮುದ್ದೇಶ, ಡಾ.ಸೀಬಂತಿ ಪದ್ಮನಾಭ ಸೇರಿದಂತೆ ರಾಜ್ಯದ ವಿವಿಧ ಕಾಲೇಜುಗಳ ಅಧ್ಯಾಪಕರು ಭಾಗವಹಿಸಿದ್ದರು.
ಡಾ.ಟಿ.ಶಾರದಾ ಕಾರ್ಯಕ್ರಮ ನಿರೂಪಿಸಿದರು.
ಪತ್ರಿಕೋದ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷರಾಗಿ ಪ್ರೊ.ಬಿ.ಕೆ.ರವಿ ಮರುಆಯ್ಕೆ:
ಬೆಂಗಳೂರು: ಕರ್ನಾಟಕ ರಾಜ್ಯ ಪತ್ರಿಕೋದ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷರಾಗಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಅವರು ಮರುಆಯ್ಕೆಯಾಗಿದ್ದಾರೆ.
ಭಾನುವಾರು ನಗರದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಕೌನ್ಸೆಲ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಪ್ರೊ.ಬಿ.ಕೆ.ರವಿ ಅವರು ಒಮ್ಮತದಿಂದ ಆಯ್ಕೆಯಾದರು.
ಇತರ ಪದಾಧಿಕಾರಿಗಳು ಇಂತಿದ್ದಾರೆ. ಹಿರಿಯ ಉಪಾಧ್ಯಕ್ಷರು; ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ನಿರಂಜನ ವಾನಳ್ಳಿ, ಉಪಾಧ್ಯಕ್ಷರು- ಪ್ರೊ.ಮಮತಾ, ಮೈಸೂರು, ಪ್ರೊ.ಶೈಲಶ್ರೀ, ಬೆಂಗಳೂರು, ಪ್ರೊ.ಚಂದೂನವರ, ಧಾರವಾಡ; ಪ್ರೊ.ಓಂಕಾರ ಕಾಕಡೆ, ವಿಜಯಪುರ; ಪ್ರಧಾನ ಕಾರ್ಯದರ್ಶಿ- ಡಾ.ಪ್ರಶಾಂತ, ಬೆಂಗಳೂರು; ಕಾರ್ಯದರ್ಶಿ- ಡಾ.ಭಾಸ್ಕರ ಹೆಗಡೆ, ಉಜಿರೆ; ಖಜಾಂಚಿ- ಡಾ.ಟಿ.ಶಾರದಾ ಬೆಂಗಳೂರು; ಮಾಧ್ಯಮ ಸಂಯೋಜಕರು-ಡಾ.ರಾಜೇಶ್ವರಿ ತಾರಕೇಶ್, ಬೆಂಗಳೂರು; ಸಂಘಟನಾ ಕಾರ್ಯದರ್ಶಿಗಳು- ಡಾ.ಬಿ.ಟಿ.ಮುದ್ದೇಶ, ತುಮಕೂರು, ಡಾ.ವಾಹಿನಿ ಅರವಿಂದ, ಬೆಂಗಳೂರು ಡಾ.ರಾಕೇಶ ತಾಳೀಕೋಟೆ, ಬಳ್ಳಾರಿ, ಪ್ರೊ.ಶಿವಕುಮಾರ ಕಣಸೋಗಿ, ದಾವಣಗೆರೆ, ಪ್ರೊ.ಸತೀಶಕುಮಾರ, ಶಿವಮೊಗ್ಗ, ಪ್ರೊ.ಸಂಜೀವರಾಜ, ಬೆಂಗಳೂರು; ಕಾರ್ಯಕಾರಿ ಸಮಿತಿ ಸದಸ್ಯರು- ಡಾ.ಮಹೇಶ, ಬೆಂಗಳೂರು, ಡಾ.ಜೆನಿನ್ ಬೆಂಗಳೂರು, ಪ್ರೊ.ಪುಟ್ಟಸ್ವಾಮಿ, ಮೈಸೂರು, ಡಾ.ಸೌಮ್ಯ, ಮಂಗಳೂರು, ಡಾ.ತಹಮೀನಾ ಕೋಲಾರ, ವಿಜಯಪುರ, ಡಾ.ರಾಘವೇಂದ್ರ, ಬೆಂಗಳೂರು, ಡಾ.ವಿಜಯ, ಕೋಲಾರ, ಪ್ರೊ.ತೇಜಸ್ವಿ ನವಿಲೂರ, ಮೈಸೂರು, ಡಾ.ಸೀಬಂತಿ ಪದ್ಮನಾಭ, ತುಮಕೂರು ಡಾ.ಭಾಗ್ಯಲಕ್ಷಿö್ಮ ಪದಕಿ, ಬೆಂಗಳೂರು, ಡಾ.ಸಿ.ಎಸ್.ಮಂಜುಳಾ, ಹಾಸನ.