ಡೆಡ್ಲಿ ಸೋಮ, ಮಾದೇಶ ಖ್ಯಾತಿಯ ರವಿ ಶ್ರೀವತ್ಸ ಅವರ ನಿರ್ಮಾಣ ಹಾಗೂ ನಿರ್ದೇಶನದ ‘ಗ್ಯಾಂಗ್ಸ್ ಆಫ್ ಯುಕೆ’ ಚಿತ್ರದ ಹಾಡು ಹಾಗೂ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು.
ರಿಯಲ್ ಸ್ಟಾರ್ ಉಪೇಂದ್ರ ಅವರು ಟ್ರೇಲರ್ ಗೆ ಚಾಲನೆ ನೀಡಿ ಶುಭ ಕೋರಿದರು. ನಿರ್ಮಾಪಕ ಕೆ.ಮಂಜು, ಉಮೇಶ್ ಬಣಕಾರ್, ನ್ಯಾಯವಾದಿ ಟಿ.ಪ್ರಸನ್ನಕುಮಾರ್, ರಾಧಾಕೃಷ್ಣ ಅಡಿಗ, ಪ್ರವೀಣ್, ಉದಯ್, ಸೇತು ಮುಕುಂದನ್, ಥ್ರಿಲ್ಲರ್ ಮಂಜು ಹಾಗೂ ರವಿ ಶ್ರೀವತ್ಸ ಹಿತೈಶಿಗಳು ಹಾಗೂ ಸ್ನೇಹಿತರನೇಕರು ಹಾಜರಿದ್ದರು.
ತಮ್ಮ ಡೆಡ್ಲಿ ಆರ್ಟ್ಸ್ ಬ್ಯಾನರ್ ಮೂಲಕ ‘ಗ್ಯಾಂಗ್ಸ್ ಆಫ್ ಯುಕೆ’ ಚಿತ್ರವನ್ನು ರವಿ ಶ್ರೀವತ್ಸ ಅವರೇ ನಿರ್ಮಿಸಿದ್ದಾರೆ.ಬಾಗಲಕೋಟೆಯ ಪಿಲ್ಲಾರಿ ಫಾಲ್ಸ್ ನಲ್ಲಿ ನಡೆದ ನೈಜ ಘಟನೆ ಇಟ್ಟುಕೊಂಡು ರವಿ ಶ್ರೀವತ್ಸ ಅವರು ಕಥೆಗಾರ ಎಂ.ಎಸ್. ರಮೇಶ್ ಜತೆಗೂಡಿ ಈ ರಾ ಸಬ್ಜೆಕ್ಟ್ ಗೆ ಚಿತ್ರಕಥೆ, ಸಂಭಾಷಣೆ ಹೆಣೆದಿದ್ದಾರೆ.
ಈ ಸಂದರ್ಭದಲ್ಲಿ, ಚಿತ್ರವನ್ನು ರಿಲೀಸ್ ಹಂತದವರೆಗೆ ತರುವಾಗ ಎದುರಿಸಿದ ಸಂಕಷ್ಟಗಳನ್ನು ವಿವರಿಸಿದ ರವಿ ಶ್ರೀವತ್ಸ ಅವರು “ಪ್ರಾದೇಶಿಕ ಸೆನ್ಸಾರ್ ಮಂಡಳಿ ವೈಲೆನ್ಸ್ ಆಗಿದೆ ಎಂಬ ಕಾರಣ ನೀಡಿ, ನಮ್ಮ ಚಿತ್ರವನ್ನು ಬ್ಯಾನ್ ಮಾಡಿದ್ದಲ್ಲದೆ, ಆರ್.ಸಿ.ಗೆ ಹೋಗಿ ಸೆನ್ಸಾರ್ ಮಾಡಿಸಿಕೊಳ್ಳಿ ಎಂದರು. ಅಲ್ಲದೆ ನಾವು ಕಷ್ಟಪಟ್ಟು ನಿರ್ಮಿಸಿದ ಸಿನಿಮಾನ ಸೆನ್ಸಾರ್ ಅಧಿಕಾರಿಗಳು ಪೂರ್ತಿ ವೀಕ್ಷಿಸದೆ ಬೇಜವಾಬ್ದಾರಿತನ ತೋರಿಸಿದರು. ಇದರಿಂದ ನನ್ನ ಮನಸಿಗೆ ತುಂಬಾ ನೋವಾಯಿತು. ನಂತರ ರಿವೈಸಿಂಗ್ ಕಮಿಟಿಗೆ ಹೋಗಿ ಚಿತ್ರವನ್ನು ಸೆನ್ಸಾರ್ ಮಾಡಿಸಲಾಯಿತು” ಎಂದು ಬೇಸರದಿಂದಲೇ ಹೇಳಿದ. ಉಪೇಂದ್ರ ಮಾತನಾಡುತ್ತಾ “ನಾವು ಕಾಶಿನಾಥ್ ಸರ್ ಸ್ಕೂಲ್ ನಿಂದ ಬಂದ ನಂತರ ನಮಗೆ ಇನ್ನೊಂದು ಸ್ಕೂಲ್ ಇದೆ ಅಂತ ಗೊತ್ತಾಯ್ತು. ಇವರೆಲ್ಲ ಅಲ್ಲಿದ್ದರು. ರವಿ ಶ್ರೀವತ್ಸ ತುಂಬಾ ಎಮೋಷನಲ್. ಅವರ ಸಿನಿಮಾ ಕೂಡ ಹಾಗೇ ಇರುತ್ತದೆ. ಎಲ್ಲಾ ಕಲಾವಿದರು ಚೆನ್ನಾಗಿ ಮಾಡಿದ್ದಾರೆ. ನಾನು ಎ ಸಿನಿಮಾ ಮಾಡಿದಾಗಲೂ ಇದೇ ಸಿಚುಯೇಶನ್ ಎದುರಿಸಿದ್ದೆ. ಇಲ್ಲಿ ಪಾಸಿಟಿವ್ ವೈಬ್ರೇಶನ್ ಕಾಣಿಸ್ತಿದೆ” ಎಂದರು.
ಎಂ.ಎಸ್.ರಮೇಶ್ “ರವಿ ೨ ವರ್ಷಗಳ ಹಿಂದೆ ಈ ಕಥೆ ಹೇಳಿದ್ದರು. ಬಾಗಲಕೋಟಿಗೆ ಹೋದಾಗ ನನ್ನ ಗುರುಗಳು (ಕೆವಿ.ರಾಜು) ನೆನಪಾದರು” ಎಂದು ನೆನಪಿಸಿಕೊಂಡರು. ನಿರ್ಮಾಪಕ ಕೆ.ಮಂಜ “ರವಿ ಈ ಸಿನಿಮಾನ ತುಂಬಾ ಕಷ್ಟಪಟ್ಟು ಮಾಡಿದ್ದಾರೆ” ಎಂದರು. ಉಮೇಶ್ ಬಣಕಾರ್ “ನಾನು ಈ ಸಿನಿಮಾ ನೋಡಿದಾಗಲೇ ರವಿಗೆ ನಿಮ್ಮ ಚಿತ್ರ ಸೆನ್ಸಾರಾಗಲ್ಲ ಎಂದು ಹೇಳಿದ್ದೆ. ಹಾಗೇ ಆಯಿತು. ಆದರೂ ಅವರು ಎಲ್ಲವನ್ನೂ ಗೆದ್ದು ಬಂದಿದ್ದಾರೆ” ಎಂದರು.
ಪ್ರಸನ್ನಕುಮಾರ್ “ಆರಂಭದಲ್ಲಿ ರವಿ ಶ್ರೀವತ್ಸ ನನ್ನ ಮನೆ ಬಾಡಿಗೆ ಕೇಳಿಕೊಂಡು ಬಂದಿದ್ದರು. ಆಗ ನಾನು ಸಿನಿಮಾದವ್ರಿಗೆ ಮನೆ ಕೊಡಲ್ಲ ಎಂದಿದ್ದೆ, ಸಿನಿಮಾ ಅದ್ಭುತವಾಗಿದೆ. ಒಂದೊಂದು ಸೀನ್ ನೋಡುವಾಗ ಮೈ ಜುಂ ಎನಿಸುತ್ತದೆ” ಎಂದು ಹೇಳಿದರು.