ಖ್ಯಾತ ಪತ್ರಕರ್ತ ದಿ. ರವಿ ಬೆಳಗೆರೆ ಅವರು ಜೋಗತಿಯರ ಜೀವನದ ಆಗು ಹೋಗುಗಳ ಬಗ್ಗೆ ಬರೆದಿರುವ ‘ವೇಶಗಳು’ ಎಂಬ ಸಣ್ಣ ಕಥೆಯನ್ನಾಧರಿಸಿ ಅದೇ ಹೆಸರಿನಲ್ಲಿ ಚಲನಚಿತ್ರವೊಂದು ತಯಾರಾಗುತ್ತಿದೆ.
ಗ್ರೀನ್ ಟ್ರೀ ಸ್ಟುಡಿಯೋಸ್ ಅಡಿಯಲ್ಲಿ ಕಿಶನ್ ರಾವ್ ದಳವಿ ಅವರು ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಟೈಟಲ್ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು.
ಈ ಚಿತ್ರದಲ್ಲಿ ಕೆಲಸ ಮಾಡುವವರೆಲ್ಲರೂ ರಂಗಪ್ರತಿಭೆಗಳೇ ಆಗಿದ್ದರಿಂದ, ರಾಜ್ ಗುರು ಸಂಗಡಿಗರಿಂದ ರಂಗಗೀತೆಗಳ ಗಾಯದ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು.
ಜು.೮ರಂದು ಶ್ರೀನಗರ ಕಿಟ್ಟಿ ಅವರ ಹುಟ್ಟುಹಬ್ಬದ ದಿನ ಭಾವನಾ ಬೆಳಗೆರೆ ಹಾಗೂ ಶ್ರೀನಗರ ಕಿಟ್ಟಿ ಅರ್ಪಿಸುವ ‘ವೇಶಗಳು’ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಹಾಗೂ ಬರ್ತ್ ಡೇ ಸಮಾರಂಭ ಏರ್ಪಡಿಸಲಾಗಿತ್ತು.
ವೇದಿಕೆಯಲ್ಲಿ ನಿರ್ದೇಶಕ ಕಿಶನ್ ರಾವ್ ಅವರು ಈ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಲು ಬೆಳಗೆರೆ ಅವರ ಮಗಳು ಭಾವನಾ ಒಪ್ಪಿಗೆ ಹಾಗೂ ಅಳಿಯ ಕಿಟ್ಟಿ ಅವರಿಂದ ಜೋಗತಿ ಪಾತ್ರಕ್ಕೆ ಒಪ್ಪಿಸಲು ಪಟ್ಟಂಥ ಹರಸಾಹಸಗಳನ್ನು ತೆರೆಯ ಮೇಲೆ ಪ್ರದರ್ಶಿಸಲಾಯಿತು.
ಈ ಚಿತ್ರದಲ್ಲಿ ನಮ್ಮ ಜೋಗತಿಯರ ಬಗ್ಗೆ ಹಾಗೂ ಅವರ ಜೀವನ ಶೈಲಿಯ ಬಗ್ಗೆ ಹೇಳಲಾಗುತ್ತಿದೆ. ಇಲ್ಲಿ ನಟ ಶ್ರೀನಗರ ಕಿಟ್ಟಿ ಅವರು ಬಸಪ್ಪ ಹಾಗೂ ಬಸಮ್ಮ ಜೋಗತಿಯಾಗಿ ಎರಡು ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಈಗಾಗಲೇ ಶ್ರೀನಗರ ಕಿಟ್ಟಿ ಅವರು ಜೋಗತಿ ಪಾತ್ರಕ್ಕಾಗಿ ಪ್ರಶಸ್ತಿ ವಿಜೇತ ಮಂಜಮ್ಮ ಜೋಗತಿ ಅವರನ್ನು ಸಂಪರ್ಕಿಸಿ ಜೋಗತಿಯರ ನಡೆ, ನುಡಿಯ ಬಗ್ಗೆ ಸಾಕಷ್ಟು ಮಾಹಿತಿ ಪಡೆದುಕೊಂಡು ಸಿದ್ದತೆ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ಬಸಪ್ಪ ಪಾತ್ರವೇ ಬಹುತೇಕ ಆವರಿಸಿಕೊಂಡಿದೆ.
“ಮುಂದಿನ ತಿಂಗಳಿಂದ ಚಿತ್ರೀಕರಣ ಆರಂಭಿಸುತ್ತಿದ್ದು, ಮಧ್ಯಪ್ರದೇಶದ ಮಹಾಕಾಲೇಶ್ವರ, ಉತ್ತರ ಕರ್ನಾಟಕ, ಬೆಂಗಳೂರು ಹಾಗೂ ಮೈಸೂರಲ್ಲಿ ವ ಚಿತ್ರೀಕರಣ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಚಿತ್ರದ ಉಳಿದ ಕಲಾವಿದರ ಬಗ್ಗೆ ಮಾಹಿತಿ ನೀಡಲಾಗುವುದು” ಎಂದು ನಿರ್ದೇಶಕ ಕಿಶನ್ ರಾವ್ ತಿಳಿಸಿದರು.
ಕೌಶಿಕ್ ಹರ್ಷ ಸಂಗೀತ, ರಾಜ್ ಗುರು ದತ್ತರಾಜ್ ಸಂಭಾಷಣೆ, ಅಕ್ಷಯ್ ಪಿ.ರಾವ್ ಸಂಕಲನ ಚಿತ್ರಕ್ಕಿದೆ.
ಈ ಕಾರ್ಯಕ್ರಮದಲ್ಲಿ ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು, ಪ್ರವೀಣ್ ಕುಮಾರ್, ಶಿಲ್ಪ ಶ್ರೀನಿವಾಸ್, ಕುಶಾಲ್ ಹಾಗೂ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.