ರತ್ನ ಶ್ರೀಧರ್ ನಿರ್ಮಾಣದ, ನೀನಾಸಂ ಕಿಟ್ಟಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಹಾಗೂ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿರುವ ‘ಹಿಕೋರಾ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ಖ್ಯಾತ ರಂಗಕರ್ಮಿ, ನಟ ಹಾಗೂ ನಿರ್ದೇಶಕ ಪ್ರಕಾಶ್ ಬೆಳವಾಡಿ ಟ್ರೇಲರ್ ಅನಾವರಣ ಮಾಡಿದರು. ಹೆಸರಾಂತ ನಿರ್ದೇಶಕ ದಿನೇಶ್ ಬಾಬು, ಮಾಜಿ ಶಾಸಕ ಬಾಲರಾಜ್, ವಿತರಕರ ಸಂಘದ ಅಧ್ಯಕ್ಷ ನವಶಕ್ತಿ ನಾಗರಾಜ್, ನಿರ್ಮಾಪಕರಾದ ಎ.ನರಸಿಂಹ, ಕಾಮಾಕ್ಷಿ ರಾಜು, ಕಾಮಾಕ್ಯ ಮುರಳಿ, ನಾಗೇಶ್ ಕುಮಾರ್, ಧನಲಕ್ಷ್ಮೀ ಗ್ರೂಪ್ ನ ನಾರಾಯಣಸ್ವಾಮಿ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
“ನಾನು ಕೂಡ ನೀನಾಸಂನಲ್ಲಿ ಅನೇಕ ನಾಟಕಗಳನ್ನು ಮಾಡಿದ್ದೇನೆ. ಅಲ್ಲಿಗೆ ನಾನು ಹೋಗುತ್ತಿದ್ದಾಗ ನಿರ್ಮಾಪಕಿ ರತ್ನ ಶ್ರೀಧರ್ ರುಚಿಯಾದ ಊಟ ನೀಡುತ್ತಿದ್ದರು. ಅಲ್ಲಿಂದ ಅವರ ಪರಿಚಯ. ಅವರು ನನ್ನ ಬಳಿ ಬಂದು ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ ಎಂದು ಹೇಳಿದಾಗ, ಬೇಡ ಎಂದಿದ್ದೆ. ಆದರೂ ಸಿನಿಮಾ ಮೇಲಿನ ಪ್ರೀತಿಯಿಂದ ಅವರು ನಿರ್ಮಾಣ ಮಾಡಿದ್ದಾರೆ. ನಾನು ಕೂಡ ಈ ಚಿತ್ರದಲ್ಲಿ ನಟಿಸಿದ್ದೇನೆ. ಟ್ರೇಲರ್ ಗಮನ ಸೆಳೆಯಿತು. ರತ್ನ ಅವರಿಗೆ ಹಾಗೂ ಇಡೀ ತಂಡಕ್ಕೆ ಒಳ್ಳೆಯದಾಗಲಿ” ಎಂದು ಪ್ರಕಾಶ್ ಬೆಳವಾಡಿ ಹಾರೈಸಿದರು.
“ನಿರ್ಮಾಪಕಿ ರತ್ನ ಅವರು ಹಾಗೂ ಅವರ ಪತಿ ಶ್ರೀಧರ್ ನೀನಾಸಂನಲ್ಲೇ ಮೆಸ್ ನಡೆಸುತ್ತಿದ್ದರು. ನಮಗೆಲ್ಲಾ ಅನ್ನ ಹಾಕಿದ ಮಹಾತಾಯಿ ಅವರು. ರತ್ನಕ್ಕ ಈಗ ನಿರ್ಮಾಪಕಿಯಾಗಿದ್ದಾರೆ. ನಾನು ನಿರ್ದೇಶನದ ಜತೆಗೆ ನಾಯಕನಾಗೂ ನಟಿಸಿದ್ದೇನೆ. ನಾನು ಪ್ರೇಕ್ಷಕರಲ್ಲಿ ಒಂದು ಕೇಳಿಕೊಳ್ಳುತ್ತೇನೆ. ನಾನು ಒಬ್ಬ ನಿರ್ದೇಶಕ ಹಾಗೂ ನಟನಾಗಿ ಹೇಳುತ್ತಿಲ್ಲ. ಒಬ್ಬ ಸಾಮಾನ್ಯ ಪ್ರೇಕ್ಷಕನ ಸ್ಥಾನದಲ್ಲಿ ನಿಂತು ಹೇಳುತ್ತಿದ್ದೇನೆ. ನೀವು ಕೊಟ್ಟ ದುಡ್ಡಿಗೆ ಮೋಸ ಮಾಡದಂತಹ ಸಿನಿಮಾ ಇದು. ದಯವಿಟ್ಟು ಎಲ್ಲರೂ ಚಿತ್ರಮಂದಿರಗಳಲ್ಲಿ ನಮ್ಮ ಸಿನಿಮಾ ನೋಡುವ ಮೂಲಕ ಪ್ರೋತ್ಸಾಹ ನೀಡಿ” ಎಂದು ನಿರ್ದೇಶಕ ಹಾಗೂ ನಾಯಕ ನೀನಾಸಂ ಕಿಟ್ಟಿ ಹೇಳಿದರು.
“ನಾವು ನೀನಾಸಂ ಗೆ ಬಂದಾಗ ದರ್ಶನ್ ಅವರು ಅಲ್ಲಿ ಇದ್ದರು. ನಾವು ನೀನಾಸಂ ಬಿಡುವ ಹೊತ್ತಿನಲ್ಲಿ ನೀನಾಸಂ ಕಿಟ್ಟಿ ಅಲ್ಲಿ ಕಲಿಯುತ್ತಿದ್ದರು. ಪ್ರಕಾಶ್ ಬೆಳವಾಡಿ ಅವರ ನಾಟಕದಲ್ಲಿ ನಾನು ಅಭಿನಯ ಕೂಡ ಮಾಡಿದ್ದೇನೆ. ಹೀಗೆ ಕೆಲವು ಸಮಯದ ನಂತರ ನಾನು ನಿರ್ಮಾಣಕ್ಕೆ ಮುಂದಾದೆ. ಆಗ ನನ್ನ ಪತಿ ಶ್ರೀಧರ್ ನನ್ನ ಜೊತೆಗಿದ್ದರು. ಈಗ ಅವರು ನಮ್ಮೊಂದಿಗೆ ಇಲ್ಲ. ಚಿತ್ರ ಸಂಪೂರ್ಣ ಮಾಡಲು ಮಗ ಸಹಕಾರ ನೀಡಿದ್ದಾನೆ. ನೀನಾಸಂ ಕಿಟ್ಟಿ ಈ ಚಿತ್ರದ ನಾಯಕ ಹಾಗೂ ನಿರ್ದೇಶಕ. ಒಂದೊಳ್ಳೆ ಸಿನಿಮಾ ಜನರ ಮುಂದೆ ತರಲು ನಮಗೆ ವಿತರಕ ಟೇ.ಶಿ.ವೆಂಕಟೇಶ್ ಅವರು ಸಹಕಾರ ನೀಡಿದ್ದಾರೆ. ಆದಷ್ಟು ಬೇಗ ಸಿನಿಮಾ ನಿಮ್ಮ ಮುಂದೆ ಬರಲಿದೆ” ಎಂದು ನಿರ್ಮಾಪಕಿ ರತ್ನ ಶ್ರೀಧರ್ ತಿಳಿಸಿದರು.
ವಿತರಕ ಟೇ.ಶಿ.ವೆಂಕಟೇಶ್, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ನಟಿಯರಾದ ಸ್ಪಂದನ ಪ್ರಸಾದ್, ಲಾವಂತಿ ಮುಂತಾದವರು ‘ಹಿಕೋರ’ ಬಗ್ಗೆ ಮಾತನಾಡಿದರು.