ಇಂದು ಸಾಹಿತ್ಯ ಭವನದಲ್ಲಿ ಜರುಗಿದ ರಂಗಸಂಪದದ ಮಾಧ್ಯಮ ಗೋಷ್ಠಿ

MK HasiruKranti
ಇಂದು ಸಾಹಿತ್ಯ ಭವನದಲ್ಲಿ ಜರುಗಿದ ರಂಗಸಂಪದದ ಮಾಧ್ಯಮ ಗೋಷ್ಠಿ
WhatsApp Group Join Now
Telegram Group Join Now

ಬೆಳಗಾವಿ ೨೪- ಇದೇ ದಿ. ೨೪ ಮಂಗಳವಾರದಂದು ಕನ್ನಡ ಸಾಹಿತ್ಯ ಭವನದಲ್ಲಿ ರಂಗಸಂಪದವರು ಮಾಧ್ಯಮ ಗೋಷ್ಠಿಯನ್ನು ಕರೆದಿದ್ದರು. ’ರಂಗಸಖ ಪ್ರಶಸ್ತಿ -೨೦೨೬’ ಪ್ರಶಸ್ತಿ ಪ್ರಧಾನ ಮತ್ತು ಇದೇ ದಿ. ೨೭ ಶುಕ್ರವಾರದಿಂದ ದಿ.೨೯ ರವಿವಾರದ ವರೆಗೆ ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಚೈತ್ರ ನಾಟಕೋತ್ಸವ ಕುರಿತಂತೆ ರಂಗಸಂಪದದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿ ಮಾತನಾಡಿದರು.
ರಂಗಸಂಪದ ಇದೊಂದು ಹವ್ಯಾಸಿ ಕಲಾವಿದರ ಸಂಘ. ಈ ತಂಡವು ೪೭ ವರ್ಷಗಳ ಇತಿಹಾಸವನ್ನು ಹೊಂದಿದೆ. ಗಡಿ ಭಾಗವಾದ ಬೆಳಗಾವಿಯಯಲ್ಲಿ ಹಲವಾರು ಭಾಷಾ ಸಂಕಷ್ಟಗಳ ಮಧ್ಯೆಯೂ ಅಪ್ಪಟ ಕನ್ನಡ ನಾಟಕಗಳ ತಂಡವಾಗಿ ಉಳಿದುಕೊಂಡು ಬಂದಿದೆ. ಪ್ರತಿ ವರ್ಷವೂ ಹತ್ತರಿಂದ ಹನ್ನೆರಡು ನಾಟಕಗಳನ್ನು ಸದಸ್ಯರಿಗೆ ನೀಡುತ್ತಲಿದೆ. ಕರ್ನಾಟಕ, ಮಹಾರಾಷ್ಟ್ರದಲ್ಲಿಯೂ ಈ ತಂಡದ ನಾಟಕಗಳು ಪ್ರದರ್ಶನಗೊಂಡಿವೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಾಟಕೋತ್ಸವಗಳನ್ನು ರಂಗಸಂಪದ ಹಮ್ಮಿಕೊಂಡಿದೆ. ಈಗ ಹನ್ನೊಂದು ವರ್ಷಗಳಿಂದ ರಂಗಸಂಪದದ ಅಧ್ಯಕ್ಷರಾಗಿ ಡಾ. ಅರವಿಂದ ಕುಲಕರ್ಣಿಯವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ದಿ. ೨೭ ಶುಕ್ರವಾರ ಸಾಯಂಕಾಲ ೫-೩೦ ಕ್ಕೆ ವಿಶ್ವರಂಗಭೂಮಿ ದಿನಾಚರಣೆ ಹಾಗೂ ರಂಗಸಖ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಲೇಖಕರಾದ ಡಾ. ಸರಜು ಕಾಟ್ಕರ್ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಭಾರತೀಯ ಜೀವವಿಮಾ ನಿಗಮದ ಬೆಳಗಾವಿ ವಿಭಾಗದ ಹಿರಿಯ ಅಧಿಆರಿಗಳಾದ ಬಿ. ಪಿ. ರವಿ ಆಗಮಿಸಲಿದ್ದಾರೆ. ಭಾರತೀಯ ಜೀವವಿಮಾ ನಿಗಮದ ಮಾರುಕಟ್ಟೆ ವಿಭಾಗದ ಹರಿನಾಥ, ಶ್ರೀಪತಿ ಮಂಜನಬೈಲು ಉಪಸ್ಥಿತರಿರುತ್ತಾರೆ. ರಂಗಭೂಮಿ ಕಲಾವಿದ, ನಿರ್ದೇಶಕ ವಿನಯ ಕುಲಕರ್ಣಿಯವರಿಗೆ ರಂಗಸಖ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ರಾಜೇಂದ್ರ ಸೈಬಣ್ಣವರ ಮತ್ತು ದೇವಪ್ಪ ನಾಯಕ ಅವರನ್ನು ಗೌರವಿಸಲಾಗುವುದು. ಬೆಂಗಳೂರಿನ ಕಾಜಾಣ ತಂಡದವರಿಂದ ಪುರಾಣದಲ್ಲಿ ಬಾಲವ್ಯಕ್ತಿತ್ವದ ದ್ರುವ, ಶಂಕರಾಚಾರ್ಯರು, ಪ್ರಹ್ಲಾದ, ಅಷ್ಟವರ್ಕ ಮತ್ತು ನಚಿಕೇತ ಪೌರಾಣಿಕ ಪಾತ್ರಗಳ ಕುರಿತಾದ ’ಪಂಚಗವ್ಯ’ ಏಕವ್ಯಕ್ತಿ ಪ್ರದರ್ಶನ ನಡೆಯುವುದು. ಡಾ. ಎಸ್. ಎಲ್. ಎನ್. ಸ್ವಾಮಿ ನಿರ್ದೇಶವಿದೆ ಎಂದು ಡಾ. ಕುಲಕರ್ಣಿ ಹೇಳಿದರು.
ದಿ. ೨೮ ಶನಿವಾರ ಸಾಯಂಕಾಲ ೬-೩೦ ಕ್ಕೆ ರಂಗಸಂಪದ ತಂಡದವರಿಂದ ಭಾನುಮತಿ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ಹಿರಿಯ ಪತ್ರರ್ತರಾದ ಎಲ್. ಎಸ್. ಶಾಸ್ತ್ರಿ ರಚಿಸಿದ್ದು ಡಾ. ಅರವಿಂದ ಕುಲಕರ್ಣಿಯವರು ನಿರ್ದೇಶಿಸಿದ್ದಾರೆ.
ದಿ. ೨೯ ರವಿವಾರ ಸಾಯಂಕಾಲ ೬ ಕ್ಕೆ ಹನಿಗವಿ ಎಚ್. ಡುಂಡಿರಾಜ್ ರೊಂದಿಗೆ ಸಂವಾದ ಕಾರ್ಯಕ್ರಮವಿದ್ದು ಶ್ರೀಪತಿ ಮಂಜನಬೈಲು ನಡೆಯಿಸಿಕೊಡುತ್ತಾರೆ. ನಂತರ ರಂಗಸಂಪದ ತಂಡದವರಿಂದಲೇ ಈಗಾಗಲೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ಹಾಸ್ಯನಾಟಕ ಪುಕ್ಕಟೆ ಸಲಹೆ ಪ್ರದರ್ಶನಗೊಳ್ಳಲಿದೆ. ಎಚ್. ಡುಂಡಿರಾಜ ಅವರ ರಚನೆಯಾಗಿದ್ದು ಡಾ. ಅರವಿಂದ ಕುಲಕರ್ಣಿಯವರ ನಿರ್ದೇಶನವಿದೆ. ಈ ಚೈತ್ರ ನಾಟಕೋತ್ಸವಕ್ಕೆ ಭಾರತೀಯ ಜೀವ ವಿಮಾ ನಿಗಮವು ಪ್ರಾಯೋಜಕತ್ವವನ್ನು ನೀಡುತ್ತಿದೆ.
ಕೊನೆಯಲ್ಲಿ ಡಾ. ಅರವಿಂದ ಕುಲಕರ್ಣಿಯವರು ಮಾತನಾಡುತ್ತ ನಾಟಕಗಳನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಕಲಾರಸಿಕರು ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕು, ರಂಗಭೂಮಿಯನ್ನು ಉಳಿಸಬೇಕು, ಬೆಳೆಸಬೇಕಂದು ವಿನಂತಿಸಿಕೊಂಡರು
-೦-೦-೦-
ಫೋಟೋ: (ಎಡದಿಂದ ಬಲಕ್ಕೆ) ಚಿದಾನಂದ ವಾಳ್ಕೆ, ರಾಮಚಂದ್ರ ಕಟ್ಟಿ, ಡಾ. ಅರವಿಂದ ಕುಲಕರ್ಣಿ (ಅಧ್ಯಕ್ಷರು), ಗುರುನಾಥ ಕುಲಕರ್ಣಿ, ಪ್ರಸಾದ ಕಾರಜೋಳ,

 

 

 

WhatsApp Group Join Now
Telegram Group Join Now
Share This Article