ಸಂಕೇಶ್ವರ : ಜಿಲ್ಲಾಡಳಿತವು ಡೆಂಗ್ಯೂ ಬಗ್ಗೆ ಪ್ರಾಥಮಿಕ ಹಂತದಲ್ಲಿಯೇ ಅದರ ಬಗ್ಗೆ ಮುನ್ನೆಚ್ಚರಿಗೆ ಕ್ರಮ ವಹಿಸಬೇಕೆಂದು ಮಾಜಿ ಸಂಸದ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ಪಟ್ಟಣದ ಅನಂತವಿದ್ಯಾನಗರದಲ್ಲಿ ಗುರುವಾರ ಶಂಕಿತ ಡೆಂಗ್ಯೂನಿಂದ ೧೧ ವರ್ಷದ ಬಾಲಕಿ ಶ್ರೇಯಾ ಧವಡತೆ ಸಾವನ್ನಪ್ಪಿದ ಹಿನ್ನೆಲೆ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ನಂತರ ಮಾತನಾಡಿದ ಅವರು ಸಾರ್ವಜನಿಕರ ಆರೋಗ್ಯ ರಕ್ಷಣೆ ಸರಕಾರದ ಹೊಣೆಯಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವ, ಸ್ವಚ್ಛತೆ ಬಗೆಗೆ ಹೆಚ್ಚಿನ ಗಮನ ಹರಿಸುವುದರ ಜೊತೆಗೆ ರೋಗದ ಕುರಿತಾಗಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಪ್ರತಿ ಮನೆಮನೆಗೂ ತೆರಳಿ ಪ್ರತಿಯೊಬ್ಬರ ಆರೋಗ್ಯದ ಕುರಿತು ಸಮಗ್ರ ಮಾಹಿತಿ ಪಡೆದು ಡೆಂಗ್ಯೂನಿಂದ ಆಗಬಹುದಾದ ಸಾವು ನೋವುಗಳನ್ನು ತಡೆಗಟ್ಟುವಲ್ಲಿ ಜಿಲ್ಲಾಡಳಿತ ಹೆಚ್ಚಿನ ಗಮನ ಹರಿಸಬೇಕು ಎಂದರು.
ಡೆಂಗ್ಯೂ ಕಾಯಿಲೆಯ ಹೆಚ್ಚಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳ ವೈದ್ಯರು ಸಹ ರೋಗಿಗಳಿಂದ ಹೆಚ್ಚಿನ ಹಣ ಪಡೆಯದೇ ಸೇವೆ ನೀಡಬೇಕು ಎಂದು ಸೂಚಿಸಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಕ್ವಳ್ಳಿ, ಪುರಸಭೆ ಸದಸ್ಯ ಶಿವಾನಂದ ಮುಡಶಿ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಶಾಂತ ಪಾಟೀಲ, ಯುವ ಧುರೀಣ ರೋಹನ್ ನೇಸರಿ, ಆನಂದ ಸಂಸುದ್ದಿ, ಆರೋಗ್ಯ ಅಧಿಕಾರಿಗಳು ಇದ್ದರು.