ಬೆಳಗಾವಿ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಶುಕ್ರವಾರ ಏಕಾಏಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಚಿಕ್ಕೋಡಿ, ಅಥಣಿ ಭಾಗದಿಂದ ಹೊಸ ಸದಸ್ಯರನ್ನು ನೇಮಿಸಿಕೊಳ್ಳುವ ವಿಚಾರದಲ್ಲಿ ಸೃಷ್ಠಿಯಾಗಿದ್ದ ಡಿಸಿಸಿ ಬ್ಯಾಂಕ್ನ ಒಳಜಗಳ ಇದೀಗ ಅಧ್ಯಕ್ಷ ಸ್ಥಾನದ ರಾಜೀನಾಮೆಯನ್ನೇ ನುಂಗಿದೆ.
ಕಳೆದ ೪೧ ವರ್ಷಗಳಿಂದ ಬ್ಯಾಂಕ್ನಲ್ಲಿ ನಿರ್ದೇಶಕರಾಗಿರುವ ರಮೇಶ್ ಕತ್ತಿ ೬ ಬಾರಿ ಅಧ್ಯಕ್ಷರಾಗಿದ್ದರು. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯ ಹೊತ್ತಿನಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಗೆಲುವಿಗೆ ಶ್ರಮಿಸಲಿಲ್ಲ ಅನ್ನುವ ಕಾರಣಕ್ಕಾಗಿ ಕತ್ತಿ ಮತ್ತು ಜೊಲ್ಲೆ ಮಧ್ಯೆ ಹೊಗೆಯಾಡುತ್ತಿದ್ದ ಅಸಮಧಾನ, ಒಳಬೇಗುದಿ ರಾಜೀನಾಮೆ ಮೂಲಕ ಇನ್ನಷ್ಟೂ ತೀವ್ರವಾಗಿದೆ.
ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿಯೂ ಕತ್ತಿ ಅವರನ್ನು ಹೊರಗಿಟ್ಟು ಪ್ರತ್ಯೇಕ ಸಭೆ ನಡೆಸಿ ನಿರ್ದೇಶಕರು ಅಧ್ಯಕ್ಷ ಕತ್ತಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು ಎಂದು ಹೇಳಲಾಗಿದೆ.
ಇಡೀ ಸರ್ಕಾರವನ್ನೇ ಬುಡಮೇಲು ಮಾಡಿದ ಬೆಳಗಾವಿ ಪಿಎಲ್ಡಿ ಚುನಾವಣೆ ರಾಜಕಾರಣ ಇತಿಹಾಸವಾದರೂ ಇದೀಗ ಡಿಸಿಸಿ ಅಧ್ಯಕ್ಷರ ರಾಜೀನಾಮೆ ಯಾವ ರೀತಿಯ ರಾಜಕೀಯ ಬೆಳವಣಿಗೆಗಳ ಪರ್ವಕ್ಕೆ ನಾಂದಿ ಹಾಡಲಿದೆಯೋ ಕಾದು ನೋಡಬೇಕಿದೆ.