ಲಕ್ನೋ ,08: ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್, ರಾಮ ಮಂದಿರದ ಬಗ್ಗೆ ನಾಲಗೆ ಹರಿಯಬಿಟ್ಟು ವಿವಾದವನ್ನು ಮೈಗೆಳೆದುಕೊಂಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ರಾಮ್ ಗೋಪಾಲ್ ಯಾದವ್, ” ಆ ಅಯೋಧ್ಯೆಯ ಶ್ರೀರಾಮ ದೇವಾಲಯವು ನಿರುಪಯೋಗಿ. ನಮ್ಮ ದೇಶದ ಯಾವುದೇ ದೇವಾಲಯವು ಆ ದೇವಾಲಯದ ರೀತಿಯಲ್ಲಿ ಕಟ್ಟಿಲ್ಲ ” ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.
” ಅಯೋಧ್ಯೆಯ ದೇವಾಲಯವು ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಾಣಗೊಂಡಿಲ್ಲ. ನಾನು ಪ್ರತೀದಿನ ಶ್ರೀರಾಮ ಪ್ರಭುವನ್ನು ಧ್ಯಾನಿಸುತ್ತೇನೆ. ಕೆಲವರು ಶ್ರೀರಾಮ ಎನ್ನುವುದು ಅವರಿಗೆ ಸಿಕ್ಕ ಪೇಟೆಂಟ್ ಎಂದು ಕೊಂಡು, ಅದರಲ್ಲೂ ರಾಜಕೀಯ ಮಾಡುತ್ತಿದ್ದಾರೆ ” ಎಂದು ಬಿಜೆಪಿಯನ್ನು ಉಲ್ಲೇಖಿಸಿ ರಾಮ್ ಗೋಪಾಲ್ ಟೀಕಿಸಿದ್ದಾರೆ.
ರಾಮ್ ಗೋಪಾಲ್ ಯಾದವ್ ಹೇಳಿಕೆಯ ಬೆನ್ನಲ್ಲೇ ಬಿಜೆಪಿ ನಾಯಕರು ಅವರ ವಿರುದ್ದ ತಿರುಗಿಬಿದ್ದಿದ್ದಾರೆ. ” ಇಂಡಿ ಒಕ್ಕೂಟವು ಜನರ ಭಾವನೆಗಳ ಜೊತೆ ಆಟವಾಡುತ್ತಿದೆ ಮತ್ತು ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಅಯೋಧ್ಯೆಯ ಮಂದಿರವನ್ನು ಹಿಂದಿನಿಂದಲೂ ಅವರು ವಿರೋಧಿಸಿಕೊಂಡು ಬರುತ್ತಲೇ ಇದ್ದಾರೆ” .
“ತಮ್ಮ ಹೆಸರಿನಲ್ಲೇ ರಾಮನನ್ನು ಇಟ್ಟುಕೊಂಡು, ಪ್ರಭು ರಾಮಚಂದ್ರನ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಸನಾತನ ಧರ್ಮಕ್ಕೆ ಮಾಡಿದ ಅವಮಾನ. ವಿನಾಶ ಕಾಲೇ ವಿಪರೀತ ಬುದ್ದಿ” ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಿಡಿಕಾರಿದ್ದಾರೆ.
ರಾಮ ಮಂದಿರದ ಬಗ್ಗೆ ಮಾಡಿದ ಅವಮಾನಕಾರಿ ಹೇಳಿಕೆಯಿದು, ಇದೇ ರಾಮ್ ಗೋಪಾಲ್ ಯಾದವ್ ಅವರು ರಾಮಭಕ್ತಿಯ ವಿಚಾರದಲ್ಲೂ ಆಢಂಬರ ಎಂದು ಹೇಳಿದ್ದರು. ಅಲ್ಲದೇ, ರಾಮಭಕ್ತರ ಮೇಲೆ ಬಂದೂಕು ಚಲಾಯಿಸಿದ ಕುಖ್ಯಾತಿಯೂ ನಿಮ್ಮ ಪಕ್ಷಕ್ಕೆ ಇದೆ. ಸನಾತನ ಧರ್ಮದ ನಾಶವೇ ಇವರ ಪರಮಗುರಿ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ ಟೀಕಿಸಿದ್ದಾರೆ.
ಗಾಜಿಯಾಬಾದ್ ನಲ್ಲಿರುವ ಹಜ್ ಭವನವು ಅವರಿಗೆ ಉಪಯುಕ್ತವಾದದ್ದು, ಅಯೋಧ್ಯೆಯ ರಾಮ ಮಂದಿರ ಅವರಿಗೆ ನಿರುಪಯುಕ್ತ. ಆಗ್ರಾದ ಮೊಘಲ್ ಗಾರ್ಡನ್ ಅವರಿಗೆ ಉತ್ತಮವಾದದ್ದು, ರಾಮ ಮಂದಿರ ಅವರಿಗೆ ಯೂಸ್ ಲೆಸ್ ಎಂದು ಬಿಜೆಪಿ ನಾಯಕ ಸುಧಾಂಶು ತ್ರಿವೇದಿ ವ್ಯಂಗ್ಯವಾಡಿದ್ದಾರೆ.
ಮೂರನೇ ಹಂತದ ಚುನಾವಣೆಯಲ್ಲಿ ಉತ್ತರ ಪ್ರದೇಶದ ಸಂಭಾಲ್, ಹತ್ರಾಸ್, ಆಗ್ರಾ, ಫತೇಪುರ್ ಸಿಕ್ರಿ, ಫಿರೋಜಾಬಾದ್, ಮೈನಪುರಿ, ಈಟಾ, ಬುಧಾನ್, ಬರೇಲಿ ಮತ್ತು ಅನೋಲ ಕ್ಷೇತ್ರದ ಚುನಾವಣೆ ನಡೆಯುತ್ತಿದೆ.