ಹುಬ್ಬಳ್ಳಿ ಮೇ,1; ಇಡೀ ಜಗತ್ತಿನಲ್ಲಿಯೇ ಅತಿ ದೊಡ್ಡ ಲೈಂಗಿಕ ಹಗರಣ ನಡೆಸಿರುವ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಎಲ್ಲಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇಂತಹ ಘೋರ ದುರಂತದ ನಡುವೆಯೂ ಜೆಡಿಎಸ್ ನೊಂದಿಗೆ ಬಿಜೆಪಿ ಮೈತ್ರಿ ಮುಂದುವರೆಸಿರುವುದರ ಔಚಿತ್ಯವೇನು ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಯುವ ಅಭ್ಯರ್ಥಿ ವಿನೋದ ಅಸೂಟಿ ಅವರ ಪರವಾಗಿ ಪ್ರಚಾರ ನಡೆಸುತ್ತಿರುವ ರಕ್ಷಾ ರಾಮಯ್ಯ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮುಂಚೆಯೇ ಗೊತ್ತಿತ್ತು. ಎಲ್ಲವೂ ಅರಿತಿದ್ದೂ ಮೈತ್ರಿ ಮಾಡಿಕೊಳ್ಳಲಾಗಿದೆ. ಮಹಿಳೆಯರ ಬಗ್ಗೆ ಗೌರವ ಇದ್ದಿದ್ದರೆ ಮೈತ್ರಿ ಮುರಿದುಕೊಳ್ಳಬೇಕಿತ್ತು. ಯಾಕೆ ಮೈತ್ರಿ ಮುಂದುವರೆದಿದ್ದಾರೆ ಎಂದರು.
ಬಿಜೆಪಿಯವರಿಗೆ ಮಹಿಳೆಯರ ಬಗ್ಗೆ ನಿಜಕ್ಕೂ ಗೌರವವಿಲ್ಲ. ಭಾರತೀಯ ಕುಸ್ತಿ ಫೆಡರೇಷನ್ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಪ್ರಕರಣವನ್ನು ನಾವು ನೋಡಿದ್ದೇವೆ. ನೂರಾರು ಜನ ಮಹಿಳಾ ಕುಸ್ತಿಪಟುಗಳು ಹೋರಾಟ ಮಾಡಿದ್ದರು. ಆದರೆ ಏನಾಯಿತು. ಕುಸ್ತಿ ಸಂಸ್ಥೆಗೆ ಇದೀಗ ಬ್ರಿಜ್ ಭೂಷಣ್ ತದ್ರೂಪ ವ್ಯಕ್ತಿಯನ್ನು ತಂದು ಕೂರಿಸಿದ್ದಾರೆ. ಇದು ಮಹಿಳೆಯರಿಗೆ ನೀಡುವ ಗೌರವವೇ?. ಪ್ರಜ್ವಲ್ ಪ್ರಕರಣ ಹೊರ ಬಂದ ನಂತರ ಮೈತ್ರಿ ಮುರಿದುಕೊಂಡಿದ್ದರೆ ಬಿಜೆಪಿಗೆ ಮಹಿಳೆಯರ ಬಗ್ಗೆ ಗೌರವವಿದೆ ಎಂಬುದು ಸಾಬೀತಾಗುತ್ತಿತ್ತು ಎಂದರು.
ಕೇಂದ್ರ ಸರ್ಕಾರದ ಬಳಿ ಇಡಿ, ಐಟಿ ಎಲ್ಲವೂ ಇದೆ. ದೂರವಾಣಿ ಕದ್ದಾಲಿಕೆಯೂ ಆಗುತ್ತಿದೆ. ಲೈಂಗಿಕ ಕ್ರೌರ್ಯದ ಘಟನೆಯ ಸತ್ಯಾಸತ್ಯತೆಯನ್ನು ಬಯಲಿಗೆ ತನ್ನಿ. ರಾಜ್ಯದ ಎಸ್.ಐ.ಟಿ ಮೂಲಕ ತನಿಖೆ ನಡೆಯುತ್ತಿದ್ದು, ಈಗಾಗಲೇ ಮೂರು ಜನ ಮಹಿಳೆಯರು ಬಂದು ದೂರು ನೀಡಿದ್ದಾರೆ ಎಂದು ರಕ್ಷಾ ರಾಮಯ್ಯ ಹೇಳಿದರು.
ಆರು ತಿಂಗಳ ಹಿಂದೆಯೇ ಬಿಜೆಪಿ ಸ್ಥಳೀಯ ನಾಯಕತ್ವದಿಂದ ಬಿಜೆಪಿ ವರಿಷ್ಠರಿಗೆ ಪ್ರಜ್ವಲ್ ಪ್ರಕರಣದ ಬಗ್ಗೆ ಮಾಹಿತಿ ಹೋಗಿದೆ. ಈ ಬೆಳವಣಿಗೆ ನಂತರ ಬಿಜೆಪಿ – ಜೆಡಿಎಸ್ ನಡುವೆ ಮೈತ್ರಿಯಾಗಿದೆ. ಇವೆಲ್ಲಾ ಗೊತ್ತಿದ್ದೂ ಮೈತ್ರಿಮಾಡಿಕೊಂಡಿದ್ದಾರೆ. ಯಾರಿಗೂ ಇಂತಹ ಪರಿಸ್ಥಿತಿ ನಿರ್ಮಾಣವಾಗಬಾರದು. ನೊಂದ ಹೆಣ್ಣು ಮಕ್ಕಳಿಗೆ ನ್ಯಾಯ ದೊರಕಿಸಿಕೊಡಲು ನಮ್ಮ ಪಕ್ಷ ಶ್ರಮಿಸಲಿದೆ ಎಂದು ಹೇಳಿದರು.