ಶ್ರೀನಗರ, ಮೇ 15: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹೊರವಲಯದಲ್ಲಿರುವ ಬಾದಾಮಿ ಬಾಗ್ ಕಂಟೋನ್ಮೆಂಟ್ನಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಸೈನಿಕರೊಂದಿಗೆ ಸಂವಾದ ನಡೆಸಿದರು. ಬಾದಾಮಿ ಬಾಗ್ ಕಂಟೋನ್ಮೆಂಟ್ನಲ್ಲಿ ಯೋಧರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ವೇಳೆ ಪಾಕಿಸ್ತಾನದ ವಿರುದ್ಧ ಹರಿಹಾಯ್ದರು. ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳನ್ನು ಅಂತಾರಾಷ್ಟ್ರೀಯ ಮೇಲ್ವಿಚಾರಣೆಯಲ್ಲಿ ಇಡಬೇಕೆಂದು ರಾಜನಾಥ್ ಸಿಂಗ್ ಕರೆ ನೀಡಿದರು.
ಪಾಕ್ನ ಪರಮಾಣು ಬಾಂಬ್ಗಳ ಮೇಲೆ ಜಾಗತಿಕ ಮೇಲ್ವಿಚಾರಣೆ ಅಗತ್ಯ; ರಾಜನಾಥ್ ಸಿಂಗ್

ಶ್ರೀನಗರದ ಬಾದಾಮಿ ಬಾಗ್ ಕಂಟೋನ್ಮೆಂಟ್ನಲ್ಲಿ ಭಾರತೀಯ ಸೇನೆಯ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವರು, ಆಪರೇಷನ್ ಸಿಂಧೂರ್ನ ಯಶಸ್ಸಿನಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಸೈನಿಕರ ಪಾತ್ರಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಭಯೋತ್ಪಾದನೆ ವಿರುದ್ಧ ಹೋರಾಡಿ ಪ್ರಾಣ ತ್ಯಾಗ ಮಾಡಿದ ಧೈರ್ಯಶಾಲಿ ಸೈನಿಕರಿಗೆ ಹಾಗೂ ಪಹಲ್ಗಾಮ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಮುಗ್ಧ ನಾಗರಿಕರಿಗೆ ಗೌರವ ಸಲ್ಲಿಸಿದರು. “ಮೊದಲನೆಯದಾಗಿ, ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧ ಹೋರಾಡಿದ ವೀರ ಯೋಧರ ಅತ್ಯುನ್ನತ ತ್ಯಾಗಕ್ಕೆ ನಾನು ನಮಸ್ಕರಿಸುತ್ತೇನೆ. ಪಹಲ್ಗಾಮ್ನಲ್ಲಿ ಕೊಲ್ಲಲ್ಪಟ್ಟ ಮುಗ್ಧ ನಾಗರಿಕರಿಗೂ ನಾನು ಗೌರವ ಸಲ್ಲಿಸುತ್ತೇನೆ. ಗಾಯಗೊಂಡ ಸೈನಿಕರ ಶೌರ್ಯಕ್ಕೂ ನಾನು ನಮಸ್ಕರಿಸುತ್ತೇನೆ ಮತ್ತು ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ರಾಜನಾಥ್ ಸಿಂಗ್ ಹೇಳಿದರು.