ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಪ್ರಚಾರಕ್ಕೆ ಚಾಲನೆ ರಾಜೇಂದ್ರ ಪಾಟೀಲ, ಭಾಲಚಂದ್ರ ಜಾರಕಿಹೋಳಿ, ಅಣ್ಣಾಸಾಹೇಬ ಜೊಲ್ಲೆ ಭಾಗಿ

Pratibha Boi
WhatsApp Group Join Now
Telegram Group Join Now

ಸಂಕೇಶ್ವರ: ತೀವ್ರ ಕುತೂಹಲ ಕೆರಳಿಸಿರುವ ಹುಕ್ಕೇರಿ ತಾಲೂಕಾ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುಣಾವಣೆಗೆ ಇಂದು ಸಂಕೇಶ್ವರದ ಶಂಕರಲಿಂಗ ಭವನದಲ್ಲಿ ಚಾಲನೆ ನೀಡಲಾಯಿತು.ಹೊಸ ಪ್ಯಾನಲ್ಲಿಗೆ ಅಪ್ಪಣ್ಣಗೌಡ ಪಾಟೀಲ ಸಹಕಾರ ಪ್ಯಾನೆಲ್ಲ ಎಂದು ಹೆಸರಿಡಲಾಗಿದೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹುಕ್ಕೇರಿ ತಾಲೂಕಾ ವಿದ್ಯುತ್ ಸಹಕಾರಿ ಸಂಘದ ಸಂಚಾಲಕ ಶಶಿರಾಜ ಪಾಟೀಲ ಅವರು ಕಳೆದ ೩೦ ವರ್ಷಗಳಲ್ಲಿ ಮಾಡಲಾಗದ ಕೆಲಸವನ್ನು ಜೊಲ್ಲೆ-ಜಾರಕಿಹೋಳಿ ನೇತೃತ್ವದಲ್ಲಿ ಕಳೆದ ೨ ತಿಂಗಳಿನಿಂದ ಮಾಡಲಾಗಿದೆ.ನಿರಂತರ ಜ್ಯೋತಿ ವಿದ್ಯುತ್ ಯೋಜನೆಯನ್ನು ಹುಕ್ಕೇರಿ ತಾಲೂಕಿನ ೬೮ ಹಳ್ಳಿಗಳಿಗೆ ಕೈಗೆತ್ತಿಕೊಳ್ಳಲಾಗಿದೆ.ರೈತರಿಗೆ ಅನುಕೂಲವಾಗಲು ಹೊಸ ಟಿ.ಸಿ ಗಳನ್ನು ಕೂಡ್ರಿಸಲಾಗುತ್ತಿದೆ. ವಿದ್ಯುತ್ ಸಹಕಾರಿ ಸಂಘದಲ್ಲಿ ಸುದೀರ್ಘ ಕಾಲದಿಂದಲೂ ಹಂಗಾಮಿಯಾಗಿ ಕೆಲಸ ಮಾಡುತಿದ್ದ ೧೨೪ ಜನರನ್ನು ಖಾಯಂಗೊಳಿಸಲಾಗಿದೆ ಎಂದು ಹೇಳಿದರು.
ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಮಾತನಾಡಿ, ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಹುಕ್ಕೇರಿ ತಾಲೂಕಾ ವಿದ್ಯುತ್ ಸಹಕಾರಿ ಸಂಘದ ಸಂಚಾಲಕರು ಬಂದು ನಮ್ಮ ಹತ್ತಿರ ನೆರವು ಕೇಳಿದಾಗ ಅವರ ಕಷ್ಟಕ್ಕೆ ನಾವು ಸ್ಪಂದಿಸಿದ್ದೆವೆ., .ಭಾರಿ ಪ್ರಮಾಣದ ಸಾಲದ ಭಾಧೆಯಿಂದ ನರಳುತಿದ್ದು ರೈತರಿಗೆ ಕಬ್ಬಿನ ಬಿಲ್ಲು ಹಾಗೂ ಕಾರ್ಮಿಕರಿಗೆ ವೇತನ ಕೊಡಲು ಆಗಾದಾದಾಗ ನಾವು ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ತಮ್ಮ ಬಿರೇಶ್ವರ ಸಹಕಾರಿ ಸಂಘದಿಂದ ೧೦೦ ಕೋಟಿ ರೂಪಾಯಿ ಹಾಗೂ ಬಿ.ಡಿ.ಸಿ.ಸಿ ಬ್ಯಾಂಕಿನಿಂದ ೭೦ ಕೋಟಿ ರೂಪಾಯಿ ಸಾಲ ನೀಡಿದ್ದೆವೆ. ಆ ಸಕ್ಕರೆ ಕಾರ್ಖಾನೆಯಲ್ಲಿ ನಮ್ಮವರು ಯಾರನ್ನೂ ಸದಸ್ಯರನ್ನಾಗಿ ಮಾಡುವ ಇಚ್ಛೆ ಇಲ್ಲ. ಕೇವಲ ಅಪ್ಪಣ್ಣಗೌಡರು ಸ್ಥಾಪಿಸಿದ ಸಹಕಾರಿ ಸಕ್ಕರೆ ಕಾರ್ಖಾನೆ ಮುಚ್ಚಬಾರದು ಎಂಬ ಉದ್ದೇಶದಿಂದ ನಾವು ನೆರವು ನೀಡಿದ್ದೆವೆ ಎಂದು ಹೇಳಿದರು.
ಶಾಸಕ ಭಾಲಚಂದ್ರ ಜಾರಕಿಹೋಳಿ ಅವರು ಮಾತನಾಡಿ, ಕತ್ತಿ ಗುಂಪು ತಮ್ಮನ್ನು ಹಾಗೂ ಜೊಲ್ಲೆಯವರನ್ನು ಹೊರಗಿನವರೆಂದು ಅಪಪ್ರಚಾರ ಮಾಡುತ್ತಿದೆ.೨೦೧೫ ರಲ್ಲಿ ಬಿ.ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷ ಚುನಾವಣೆ ನಡೆದಾಗ ರಮೇಶ ಕತ್ತಿ ಅವರಿಗೆ ಕೇವಲ ಓರ್ವ ಸಂಚಾಲಕರ ಬೆಂಬಲ ಮಾತ್ರ ಇತ್ತು. ಅವರಿಗೆ ಓರ್ವ ಅನುಮೋದಕರು ಸಹಿತ ಸಿಕ್ಕಿರಲಿಲ್ಲ. ಆಗ ನಮ್ಮ ಕಡೆಗೆ ಬಂದ ರಮೇಶ ಕತ್ತಿ ಅವರನ್ನು ನಾವು ಬಿ.ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರನ್ನಾಗಿ ಮಾಡಿದೆವು. ಆಗ ನಾವು ಅವರಿಗೆ ಬೇಕಾಗಿದ್ದೆವು. ಆದರೆ ಈಗ ನಾವು ಅವರಿಗೆ ಹೊರಗಿನವರಾಗಿದ್ದೆವೆ ಎಂದು ಹೇಳಿ, ಕಳೆದ ೩೦ ವರ್ಷಗಳಿಂದ ಹುಕ್ಕೇರಿ ತಾಲೂಕಿನ ಸಹಕಾರಿ ಕ್ಷೇತ್ರದಲ್ಲಿ ಏಕಸಾಮ್ಯತ್ವ ನಡೆದಿದ್ದು ಜನರ ಅಭಿಲಾಶೆಗೆ ತಕ್ಕ ಕೆಲಸಗಳಾಗಿಲ್ಲ. ಅದರ ಬದಲಿಗೆ ನಾವು ಈಗ ಜನಪರವಾಗಿ ಕೆಲಸ ಮಾಡಲು ನಿರ್ಧರಿಸಿದ್ದು ತಾಲೂಕಿನ ಜನರು ಅದಕ್ಕೆ ಬೆಂಬಲ ನೀಡಬೇಕು ಎಂದರು.
ಸಮಾರಂಭದಲ್ಲಿ ಕತ್ತಿ ಗುಂಪಿನ ಜೊತೆಗೆ ಗುರುತಿಸಿಕೊಂಡಿದ್ದ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ರಾಜೇಂದ್ರ ಪಾಟೀಲ, ಹಿರಿಯ ಸಹಕಾರಿ ಧುರೀಣರಾದ ಶ್ರೀಕಾಂತ ಹತನೂರಿ,ಶಂಕರರಾವ ಹೆಗಡೆ,ಕುನಾಲ ಪಾಟೀಲ, ಸಂಕೇಶ್ವರ ಪುರಸಭೆಯ ಸದಸ್ಯರಾದ ಸಂಜಯ ಶಿರಕೋಳಿ, ಅಮರ ನಲವಡೆ. ಅಜಿತ ಕರಜಗಿ ಅವರು ಜೊಲ್ಲೆ-ಜಾರಕಿಹೋಳಿ ಅವರ ಜೊತೆಗೆ ಗುರುತಿಸಿಕೊಂಡಿದ್ದು ಹೊಸ ರಾಜಕೀಯಕ್ಕೆ ನಾಂದಿಯಾದಂತಾಯಿತು. ರವೀಂದ್ರ ಹಿಡಕಲ್ ಸ್ವಾಗತಿಸಿದರು. ಕೊನೆಯಲ್ಲಿ ವಿನಯ ಸಾವಂತ ವಂದಿಸಿದರು.
ಪೊಟೊ- ೩೧ ಎಸಕೆವಿ ೧ಇಪಿ- ಸಂಕೇಶ್ವರದಲ್ಲಿ ಇಂದು ತಾಲೂಕಾ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುಣಾವಣೆಗೆ ಚಾಲನೆ ನೀಡಲಾಯಿತು.ಚಿತ್ರದಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ಭಾಲಚಂದ್ರ ಜಾರಕಿಹೋಳಿ, ರಾಜೇಂದ್ರ ಪಾಟೀಲ, ಶ್ರೀಕಾಂತ ಹತನೂರಿ, ಅಮರ ನಲವಡೆ, ಸಂಜಯ ಶಿರಕೋಳಿ ಮತ್ತಿತರರು ಇದ್ದಾರೆ.

 

 

WhatsApp Group Join Now
Telegram Group Join Now
Share This Article