ಬೆಂಗಳೂರು : ಹನಿಟ್ರ್ಯಾಪ್ ಸಂಬಂಧ ಸಚಿವ ಕೆ. ಎನ್ ರಾಜಣ್ಣ ದೂರು ಕೊಡಬೇಕಲ್ಲ. ದೂರು ಬಂದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ ಜಿ. ಪರಮೇಶ್ವರ್ ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆ. ಎನ್ ರಾಜಣ್ಣ ದೂರು ಕೊಡದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರು ದೂರು ಕೊಡಬೇಕಲ್ಲ. ದೂರು ಕೊಡದೆ ಯಾವುದೇ ತನಿಖೆ ನಡೆಸಲು ಬರಲ್ಲ. ಎಫ್ಐಆರ್ ಇಲ್ಲದೆ ತನಿಖೆ ಮಾಡೋಕೆ ಬರಲ್ಲ. ರಾಜಣ್ಣ ಅವರಿಗೆ ಸಾಕಷ್ಟು ಆಪ್ತರಿದ್ದಾರೆ. ನಾನೂ ಅವರ ಆಪ್ತಬಳಗದಲ್ಲೇ ಇದ್ದೇನೆ. ಅವರು ಯಾವ ಆಪ್ತರ ಬಳಿ ಮಾತನಾಡಿದ್ರೋ ಗೊತ್ತಿಲ್ಲ. ನಮಗೆ ಯಾವ ದೂರು ಬಂದಿಲ್ಲ. ದೂರು ಬಂದರೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಮಲ್ಲಿಕಾರ್ಜುನ ಖರ್ಗೆ, ಸಿಎಂ ಭೇಟಿ ವಿಚಾರವಾಗಿ ಮಾತನಾಡಿ, ಖರ್ಗೆಯವರು ನಿನ್ನೆ ಸಿಎಂ ಭೇಟಿ ಮಾಡಿದ್ದರು. ಒಳಗಡೆ ಏನು ಚರ್ಚೆಯಾಗಿದೆ ಗೊತ್ತಿಲ್ಲ. ಸಿಎಂ ಕಾಲಿಗೆ ಏಟು ಬಿದ್ದಾಗಿನಿಂದ ಅವರು ಹೋಗಿರಲಿಲ್ಲ. ಹಾಗಾಗಿ ಹೋಗಿದ್ದೆ ಅಂತ ಅವರು ಹೇಳಿದ್ದಾರಲ್ಲ. ಇದು ಬಿಟ್ಟರೆ ಹೆಚ್ಚು ಮಾಹಿತಿ ನನಗಿಲ್ಲ ಎಂದು ಹೇಳಿದರು.