ಬೆಂಗಳೂರು: ಬಹುಕೋಟಿ ಮುಡಾ ಹಗರಣ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೂರನೇ ನೋಟೀಸ್ ಅನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಜಾರಿ ಮಾಡಿದ್ದಾರೆ.
ಮೊದಲ ನೋಟೀಸ್ ಅನ್ನು ಜುಲೈ ಮೂರನೇ ವಾರದಲ್ಲಿ ಜಾರಿ ಮಾಡಿದ್ದ ರಾಜ್ಯಪಾಲರು, ಬಂದು ಮಾಹಿತಿ ಕೊಡುವಂತೆ ಸೂಚಿಸಿದ್ದರು. ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕವಾಗಿ ಚರ್ಚೆ ಆಗುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕೊಡುವಂತೆ ಸೂಚಿಸಿದ್ದರು.
ಜುಲೈ 26ನೇ ತಾರೀಕು ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ನೀಡಿದ ದೂರು ಆಧರಿಸಿ ಎರಡನೇ ನೋಟೀಸ್ ಕಳಿಸಲಾಗಿತ್ತು. ಅಬ್ರಹಾಂ ಸಲ್ಲಿಸಿದ್ದ ದೂರಿನಲ್ಲಿ, ಈ ಪ್ರಕರಣವನ್ನು ಪ್ರಾಸಿಕ್ಯೂಶನ್ಗೆ ಯಾಕೆ ಕೊಡಬಾರದು ಎಂದು ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಶೋಕಾಸ್ ನೋಟೀಸ್ ನೀಡಿದ್ದರು.
ಆಗಸ್ಟ್ 5ನೇ ತಾರೀಕು ರಾಜ್ಯಪಾಲರು ಮೂರನೇ ನೋಟೀಸ್ ಜಾರಿ ಮಾಡಿದ್ದಾರೆ. ಕಳೆದ ವಾರ ಕ್ಯಾಬಿನೆಟ್ ಸಭೆಯಲ್ಲಿ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿದ್ದ ಸಂಪುಟ, ನೋಟೀಸ್ ಹಿಂಪಡೆಯುವಂತೆ ಹೇಳಿತ್ತು. ಹೀಗಾಗಿ ಮತ್ತೆ ಕೇಸ್ನಲ್ಲಿ ಕ್ಲಾರಿಫಿಕೇಷನ್ ಕೊಡುವಂತೆ ನೋಟೀಸ್ ಜಾರಿ ಮಾಡಲಾಗಿದೆ.
ಈ ಹಿಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರಕರಣದಲ್ಲಿ ಆದುದೇ ರಾಜ್ಯಪಾಲರ ಈಗಿನ ನಡೆಗೆ ಕಾರಣ ಎನ್ನಲಾಗಿದೆ. ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಆದೇಶವನ್ನು ಯಡಿಯೂರಪ್ಪ ಪ್ರಶ್ನೆ ಮಾಡಿದ್ದರು. ರಾಜ್ಯಪಾಲರು ಅನುಮತಿ ಕೊಡುವಾಗ ಆರೋಪದ ಬಗ್ಗೆ ಮುಖ್ಯಮಂತ್ರಿಗಳಿಂದ ಮಾಹಿತಿ ಪಡೆಯುವ ಪ್ರಕ್ರಿಯೆಯನ್ನು ಸರಿಯಾಗಿ ನಡೆಸಿಲ್ಲ. ಆತುರಾತುರವಾಗಿ ನಿರ್ಧಾರ ಮಾಡಿ ನೋಟೀಸ್ ಕೊಟ್ಟಿದ್ದಾರೆ. ರಾಜ್ಯ ಸರ್ಕಾರವನ್ನು ಅಭದ್ರ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಆರೋಪಿಸಿದ್ದರು.