ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಕೇವಲ ಸಚಿವ ನಾಗೇಂದ್ರ ಅವರಷ್ಟೇ ಅಲ್ಲದೆ ಎಲ್ಲಾ ಇಲಾಖೆಗಳೂ ಭಾಗಿಯಾಗಿವೆ. ಭ್ರಷ್ಟಾಚಾರ ಹಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೂ ಹಣ ಹೋಗಿದೆ. ಹೀಗಾಗಿ ನೈತಿಕ ಹೊಣೆ ಹೊತ್ತು ಸಚಿವ ನಾಗೇಂದ್ರ ಜೊತೆ ಸಿಎಂ ಕೂಡ ರಾಜೀನಾಮೆ ನೀಡಬೇಕು. ಅವರು ರಾಜೀನಾಮೆ ನೀಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಇಂದು ರಾಜಭವನ ಚಲೋ ಹಮ್ಮಿಕೊಂಡಿದ್ದ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸಚಿವ ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದರು. ಈ ವೇಳೆ ಮಾತನಾಡಿದ ವಿಜಯೇಂದ್ರ, ಕಳೆದೆರಡು ದಿನಗಳಿಂದ ನಾಗೇಂದ್ರ ಅವರ ರಾಜೀನಾಮೆ ಬಗ್ಗೆ ನಾವು ಕೇಳುತ್ತಿದ್ದೇವೆ ಆದರೆ ಅವರು ಇಂದಿಗೂ ಸಚಿವರಾಗಿ ಮುಂದುವರಿದಿದ್ದಾರೆ, ಮುಖ್ಯಮಂತ್ರಿಗಳು ಅವರ ರಾಜೀನಾಮೆ ಪಡೆಯಲು ಹಿಂದೇಟು ಹಾಕುತ್ತಿರುವುದೇಕೆ?ಹೈದ್ರಾಬಾದ್ಗೆ ನೂರಾರು ಕೋಟಿ ವರ್ಗಾವಣೆಯಾದಾಗ, ಅಧಿಕಾರಿಗಳು ನಕಲಿ ಖಾತೆಗಳನ್ನು ಸೃಷ್ಟಿಸಿದಾಗ, ಸಂಬಂಧಪಟ್ಟ ಸಚಿವರ ಒಪ್ಪಿಗೆಯಿಲ್ಲದೆ ಯಾವ ಅಧಿಕಾರಿಯೂ ಇದನ್ನೆಲ್ಲ ಮಾಡುತ್ತಾರೆ ಎಂದು ನನಗೆ ಅನಿಸುವುದಿಲ್ಲ ಎಂದರು.