ನವದೆಹಲಿ, ಮೇ 4: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉತ್ತರ ಪ್ರದೇಶದ ರಾಯ್ಬರೇಲಿಯಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಗ್ಗೆ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮಾಜಿ ಆಪ್ತ ಆಚಾರ್ಯ ಪ್ರಮೋದ್ ಕೃಷ್ಣಂ ವ್ಯಂಗ್ಯವಾಡಿದ್ದಾರೆ. ರಾಹುಲ್ ಗಾಂಧಿ ರಾಯ್ಬರೇಲಿಯಿಂದ ಚುನಾವಣೆಗೆ ಸ್ಪರ್ಧಿಸುವ ಬದಲು ಪಾಕಿಸ್ತಾನದ ರಾಹುಲ್ ರಾವಲ್ಪಿಂಡಿಯಿಂದ ಸ್ಪರ್ಧಿಸಬಹುದು. ಹೇಗೂ ಅಲ್ಲಿ ಅವರ ಜನಪ್ರಿಯತೆ ಹೆಚ್ಚುತ್ತಿದೆ ಎಂದು ಲೇವಡಿ ಮಾಡಿದ್ದಾರೆ.
ರಾಹುಲ್ ಗಾಂಧಿಯವರದ್ದು ಪಲಾಯನವಾದ ಎಂದೂ ಅವರು ಟೀಕಿಸಿದ್ದಾರೆ. ರಾಹುಲ್ ಗಾಂಧಿ ಕುರಿತು ಕುಹಕವಾಡಿ ಆಚಾರ್ಯ ಪ್ರಮೋದ್ ಕೃಷ್ಣಂ ನೀಡಿರುವ ಹೇಳಿಕೆಯನ್ನು ಎ ಎನ್ಐ ಸುದ್ದಿ ಸಂಸ್ಥೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
‘ರಾಹುಲ್ ಗಾಂಧಿ ಅಮೇಠಿ ತೊರೆದಿರುವ ರೀತಿ ಕಾಂಗ್ರೆಸ್ ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿದೆ. ಪ್ರಿಯಾಂಕಾ ಗಾಂಧಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಇದು ಈಗ ಅವರ ಬೆಂಬಲಿಗರ ಹೃದಯದಲ್ಲಿ ಜ್ವಾಲಾಮುಖಿಯ ಆಕಾರವನ್ನು ಪಡೆಯುತ್ತಿದೆ. ಅದು ಜೂನ್ 4 ರ ನಂತರ ಸ್ಫೋಟಗೊಳ್ಳಲಿದೆ. ಕಾಂಗ್ರೆಸ್ ಮತ್ತೆ ಎರಡು ಬಣಗಳಾಗಿ ವಿಭಜನೆಯಾಗಲಿದೆ. ಒಂದು ರಾಹುಲ್ ಗಾಂಧಿ ಬಣ ಮತ್ತು ಇನ್ನೊಂದು ಪ್ರಿಯಾಂಕಾ ಗಾಂಧಿ ಬಣ ಆಗಲಿದೆ. ಪಾಕಿಸ್ತಾನದಲ್ಲಿ ಅವರ ಜನಪ್ರಿಯತೆ ಮತ್ತು ಬೇಡಿಕೆ ಹೆಚ್ಚುತ್ತಿರುವ ಕಾರಣ ರಾಹುಲ್ ಗಾಂಧಿ ರಾಯ್ಬರೇಲಿ ಬದಲಿಗೆ ರಾವಲ್ಪಿಂಡಿಯಿಂದ ಸ್ಪರ್ಧಿಸುವುದು ಒಳ್ಳೆಯದು ಎಂಬುದಾಗಿ ಭಾವಿಸುತ್ತೇನೆ’ ಎಂದು ಆಚಾರ್ಯ ಪ್ರಮೋದ ಕೃಷ್ಣಂ ಹೇಳಿದ್ದಾರೆ.