ಬಳ್ಳಾರಿ. ಜು. 25: ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಹಾಲು ಉತ್ಪಾದಕ ಮಹಾಮಂಡಳಿಗೆ ಇಂದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಅಧ್ಯಕ್ಷರಾಗಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಮುತ್ತು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಾರಟಗಿ ಸತ್ಯನಾರಾಯಣ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಭು ಶಂಕರ್ ತಿಳಿಸಿದ್ದಾರೆ.
ಸಹಾಯಕ ಆಯ್ತಾ ಮತ್ತು ಚುನಾವಣಾ ಅಧಿಕಾರಿಯಾಗಿದ್ದ ಪ್ರಮೋದ್ ಅವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿದ್ದು ಇಂದು ಮುಂಜಾನೆ ಅಧ್ಯಕ್ಷ ಹುದ್ದೆಗೆ ರಾಘವೇಂದ್ರ ಹಿಟ್ನಾಳ್, ಉಪಾಧ್ಯಕ್ಷ ಹುದ್ದೆಗೆ ಸತ್ಯನಾರಾಯಣ ಅವರು ಮಾತ್ರ ನಾಮಪತ್ರವನ್ನು ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ಅವಧಿ ಮುಗಿಯುವವರೆಗೂ ಕಾದ ಚುನಾವಣಾ ಅಧಿಕಾರಿಗಳು ಅವಧಿ ಮುಗಿದ ತಕ್ಷಣ ಫಲಿತಾಂಶವನ್ನು ಪ್ರಕಟಿಸಿ ಅಧ್ಯಕ್ಷರಾಗಿ ರಾಘವೇಂದ್ರ ಹಿಟ್ನಾಳ್ ಉಪಾಧ್ಯಕ್ಷರಾಗಿ ಸತ್ಯನಾರಾಯಣ ಅವರು ಅವಿರೋಧವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೆ ಆಯ್ಕೆಗೊಂಡಿದ್ದಾರೆ ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ನಗರ ಶಾಸಕ ರಾಘವೇಂದ್ರ ಹಿಟ್ನಾಳ್ ಮತ್ತು ಸತ್ಯನಾರಾಯಣ ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಆಡಳಿತ ಮಂಡಳಿಯ ಕಚೇರಿಯ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿ ಸಿಹಿ ಹಂಚಿದರು. ಚುನಾವಣೆ ಇಂದು ನಡೆದ ಚುನಾವಣೆ ಹಿನ್ನೆಲೆಯಲ್ಲಿ ಕೊಪ್ಪಳ ಗಂಗಾವತಿ ರಾಯಚೂರು ಸೇರಿದಂತೆ ನೂರಾರು ಬೆಂಬಲಿಗರು ಆಗಮಿಸಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರು ಗಳಿಗೆ ಶುಭ ಕೋರಿದರು.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಕಂಪ್ಲಿ ಶಾಸಕರಾದ ಜೆ.ಎನ್. ಗಣೇಶ್ ಚುನಾವಣೆ ನಡೆದು ಪದಾಧಿಕಾರಿಗಳ ಘೋಷಣೆಯವರಿಗೂ ಅಲ್ಲಿದ್ದು ನಂತರ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದರು.