ಬೆಂಗಳೂರು, ಏಪ್ರಿಲ್ 27: ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಕರ್ನಾಟಕಕ್ಕೆ ಸ್ವಲ್ಪವಾದರೂ ಬರ ಪರಿಹಾರ ಕೊಡಿಸಿದ ಸುಪ್ರೀಂ ಕೋರ್ಟ್ಗೆ ಸಿಎಂ ಸಿದ್ದರಾಮಯ್ಯ ಧನ್ಯವಾದ ತಿಳಿಸಿದ್ದಾರೆ. ಸದ್ಯ ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕೇಂದ್ರದ ಬರ ಪರಿಹಾರ ಲೂಟಿ ಹೊಡೆಯಲು ನಾವು ಬಿಡಲ್ಲ. ಬರ ಪರಿಹಾರ ಬಂದಿದೆ ಈ ಹಣದ ಕಾವಲು ಕಾಯುತ್ತೇವೆ ನಾವು ಎಂದು ಹೇಳಿದ್ದಾರೆ.
ಲೂಟಿಕೋರರ ಪಕ್ಷ ಕಾಂಗ್ರೆಸ್ 50 ವರ್ಷ ಆಡಳಿತ ಮಾಡಿದೆ. ಯಾವಾಗ ಯಾವಾಗ ಕರ್ನಾಟಕ ಹಣ ಕೇಳಿದೆ? ಎಷ್ಟು ಬಿಡುಗಡೆ ಮಾಡಿದೆ? ಹೇಳಲಿ. ಅನುದಾನ ತಾರತಮ್ಯ ಮಾಡಿದ್ದರೆ ನಾವೇ ಬಂದು ಕ್ಷಮಾಪಣೆ ಕೇಳುತ್ತೇವೆ. ಇಲ್ಲ ಅಂದರೆ ಅವರು ಕ್ಷಮಾಪಣೆ ಕೇಳಲಿ ಎಂದು ಕಿಡಿಕಾರಿದ್ದಾರೆ.
ಯಾರು ಜಾಸ್ತಿ ಬಿಡುಗಡೆ ಮಾಡಿದಾರೆ ಜನ ತೀರ್ಮಾನ ಮಾಡಲಿ. ಯಾವುದೇ ಕಾರಣಕ್ಕೂ ಹಣ, ಚೆಕ್ ಮೂಲಕ ಬರದ ಹಣ ಬಿಡುಗಡೆ ಮಾಡಬಾರದು. ಡಿಬಿಟಿ ಮೂಲಕವೇ ವರ್ಗಾಯಿಸಬೇಕು. ಜಾಸ್ತಿ ಬರ ಪರಿಹಾರ ಬಂದರೆ ಜಾಸ್ತಿ ಲೂಟಿ ಹೊಡೆಯಬಹುದು ಅಂತ ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದರಲ್ಲಿ ಪ್ರತಿ ಪೈಸೆಯೂ ರೈತರಿಗೆ ಹೋಗಬೇಕು. ಈ ಹಿಂದೆ ರಾಜ್ಯ ಸರ್ಕಾರ ಲೂಟಿ ಹೊಡೆದು ಈಗಾಗಲೇ ಮಧ್ಯಪ್ರದೇಶ, ರಾಜಸ್ಥಾನಕ್ಕೆ ಹಣ ಕಳಿಸಿದೆ. ಈಗ ಬರ ಪರಿಹಾರ ಲೂಟಿ ಮಾಡಲು ನಾವು ಬಿಡಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಈ ಹಣದ ಜತೆ ರಾಜ್ಯ ಸರ್ಕಾರ ಎಷ್ಟು ಸೇರಿಸಿ ಪರಿಹಾರ ಕೊಡುತ್ತೆ ನೋಡೋಣ. ಕೇಂದ್ರದ ಪರಿಹಾರ ಕೊಟ್ಟು ನಾವೇ ಕೊಟ್ಟಿದ್ದು ಅಂತ ಹೇಳುವ ಹಾಗಿಲ್ಲ. ಇದರ ಜತೆ ರಾಜ್ಯವೂ ಪರಿಹಾರ ಸೇರಿಸಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.