ನೇಸರಗಿ: ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ದಿನಾಂಕ ೨೬.೦೯.೨೦೨೫ ರಂದು “ಬೀಜ ಮೇಳ” ವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೇಂದ್ರದ ಮುಖ್ಯಸ್ಥ ಡಾ. ಮಂಜುನಾಥ ಚೌರಡ್ಡಿಯವರು ಮಾತನಾಡುತ್ತ, ಪ್ರಸ್ತುತ ಕೃಷಿ ವ್ಯವಸ್ಥೆಯಲ್ಲಿ ಗುಣಮಟ್ಟದ ಬೀಜಗಳ ಲಭ್ಯತೆಯಿಲ್ಲದ ಕಾರಣ ವ್ಯವಸಾಯದಲ್ಲಿ ಕಡಿಮೆ ಇಳುವರಿಯಿಂದಾಗಿ ರೈತರು ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ. ಗುಣಮಟ್ಟದ ಬಿತ್ತನೆ ಬೀಜಗಳ ಬಳಕೆಯಿಂದ ರೈತರು ಉತ್ತಮ ಇಳುವರಿ ಹಾಗೂ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಹಿಂಗಾರು ಹಂಗಾಮು ಪ್ರಾರಂಭವಾಗಿದ್ದು, ಗುಣಮಟ್ಟ ಬೀಜ ರೈತರಿಗೆ ದೊರೆಯುವಂತೆ ಮಾಡುವುದೇ ಕೆವಿಕೆಯ ಬೀಜ ಮೇಳದ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಕೇಂದ್ರವು ಮುಂಚೂಣಿಯಲ್ಲಿದೆ. ಈ ದಿಸೆಯಲ್ಲಿ, ಕೃಷಿ ವಿಜ್ಞಾನ ಕೇಂದ್ರವು ಉತ್ಪಾದಿಸಿದ ಕಡಲೆ (ಬಿಜಿಡಿ-೧೧೧-೧), ಜೋಳ-(ಎಸ್‌ಪಿವಿ-೨೨೧೭), ಗೋದಿ (ಯುಎಎಸ್-೩೩೪) ಬಿತ್ತನೆ ಬೀಜಗಳನ್ನು ಬೀಜ ಮೇಳದಲ್ಲಿ ಪೂರೈಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೈಲಹೊಂಗಲ ಕೃಷಿಕ ಸಮಾಜದ ಉಪಾಧ್ಯಕ್ಷರಾದ ಶ್ರೀ ಶಿವಪುತ್ರಪ್ಪ ತಟವಟಿಯವರ ಇವರು ನೆರವೇರಿಸಿ ಮಾತನಾಡುತ್ತಾ, ಕೃಷಿ ವಿಜ್ಞಾನ ಕೇಂದ್ರವು ರೈತರಿಗೆ ಉತ್ತಮ ತಂತ್ರಜ್ಞಾನ ಮಾಹಿತಿಯನ್ನು ನೀಡುತ್ತಿದ್ದು ಅಲ್ಲಿರುವ ನುರಿತ ವಿಜ್ಞಾನಿಗಳ ಸಂಪರ್ಕ ಬೆಳೆಸಿ ತಂತ್ರಜ್ಞಾನದ ಅಳವಡಿಕೆಯೊಂದಿಗೆ ತಮ್ಮ ವ್ಯವಸಾಯದಲ್ಲಿ ಅವುಗಳನ್ನು ಬಳಸಿಕೊಂಡು ತಮ್ಮ ಬೇಸಾಯದ ಖರ್ಚು ಕಡಿಮೆ ಮಾಡಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಲು ಕರೆ ನೀಡಿದರು.
ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರದ ಬೇಸಾಯ ತಜ್ಞ ಜಿ. ಬಿ. ವಿಶ್ವನಾಥ ಅವರು ಕೃಷಿ ವಿಜ್ಞಾನ ಕೇಂದ್ರವು ಉತ್ತಮ ಗುಣಮಟ್ಟದ ಬೀಜಗಳನ್ನು ರೈತರಿಗೆ ಪೂರೈಸುತ್ತ ಬಂದಿದ್ದು, ಹಿಂಗಾರು ಹಂಗಾಮಿನಲ್ಲಿ ಅಧಿಕ ಇಳುವರಿ ನೀಡುವ ತಳಿಗಳ ಬೀಜವನ್ನು ಪೂರೈಸುವ ಉದ್ದೇಶದಿಂದ ಬೀಜ ಮೇಳವನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು ಹಿಂಗಾರು ಬೆಳೆಗಳಲ್ಲಿ ತಳಿಗಳ ವಿಶೇ?ತೆ, ಸಮಗ್ರ ಪೋ?ಕಾಂಶ, ಕಳೆ ಹಾಗೂ ನೀರು ನಿರ್ವಹಣೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಬಿತ್ತನೆ ಸಮಯದಲ್ಲಿ ಪ್ರತಿಯೊಬ್ಬ ರೈತರು ಜೈವಿಕ ಅಥವಾ ರಸಾಯನಿಕ ರೋಗ ಮತ್ತು ಕೀಟನಾಶಕ ಮತ್ತು ಅಣುಜೀವಿ ಗೊಬ್ಬರಗಳೊಂದಿಗೆ ಬೀಜೋಪಚಾರ ಮಾಡಿ ಮುಂದೆ ಬರುವಂತಹ ಕೀಟ ಮತ್ತು ರೋಗಗಳನ್ನು ನಿರ್ವಹಣೆ ಜೊತೆಗೆ ಉತ್ತಮ ಬೆಳೆಯ ಬೆಳವಣಿಗೆಯನ್ನು ಪಡೆಯಬಹುದು ಎಂದು ರೈತರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ವಿಜ್ಞಾನಿ ಪ್ರವೀಣ ಯಡಹಳ್ಳಿ ಸ್ವಾಗತಿಸಿದರು ಹಾಗೂ ಎಸ್. ಎಸ್. ಪಾಟೀಲ ವಂದಿಸಿದರು.


