ಚನ್ನಮ್ಮನ ಕಿತ್ತೂರು: ಪಟ್ಟಣದಲ್ಲಿ ಆಭರಣ ಮಳಿಗೆಗಳ ಸುರಕ್ಷತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ, ಚನ್ನಮ್ಮನ ಕಿತ್ತೂರು ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ ಗಂಗೋಳ ಅವರು ಪಟ್ಟಣದಾದ್ಯಂತ ಇರುವ ಪ್ರಮುಖ ಚಿನ್ನಾಭರಣ ಮಳಿಗೆಗಳಿಗೆ ಇತ್ತಿಚೇಗೆ ದಿಢೀರ್ ಭೇಟಿ ನೀಡಿದರು. ಮಳಿಗೆಗಳಲ್ಲಿನ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿ, ಕಳ್ಳತನದಂತಹ ಅಹಿತಕರ ಘಟನೆಗಳನ್ನು ತಡೆಯಲು ಕೈಗೊಳ್ಳಬೇಕಾದ ಅಗತ್ಯ ಸುರಕ್ಷತಾ ಕ್ರಮಗಳ ಕುರಿತು ಅಂಗಡಿ ಮಾಲೀಕರು ಮತ್ತು ಸಿಬ್ಬಂದಿಗೆ ಸಲಹೆ ಸೂಚನೆಗಳನ್ನು ನೀಡಿದರು.
ಮುಖ್ಯ ಸೂಚನೆಗಳು:
ಸಿಸಿಟಿವಿ ಅಳವಡಿಕೆ: ಎಲ್ಲಾ ಕಡೆಗಳಲ್ಲಿ ಕಡ್ಡಾಯವಾಗಿ ಹೈ ರೆಗ್ಯೂಲೇಷನ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಅವು 24/7 ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಹಿಂದಿನ ಕನಿಷ್ಠ ಒಂದು ತಿಂಗಳ ರೆಕಾರ್ಡಿಂಗ್ ಅನ್ನು ಸುರಕ್ಷಿತವಾಗಿಡಲು ನಿರ್ದೇಶಿಸಿದರು.
ಭದ್ರತಾ ವ್ಯವಸ್ಥೆ: ಮಳಿಗೆ ತೆರೆಯುವ ಮತ್ತು ಮುಚ್ಚುವ ಸಮಯದಲ್ಲಿ ವಿಶೇಷ ಜಾಗರೂಕತೆ ವಹಿಸುವುದು, ಜೊತೆಗೆ ತುರ್ತು ಸಂದರ್ಭದಲ್ಲಿ ನೆರವು ಪಡೆಯಲು ಸಂಪರ್ಕ ಸಾಧಿಸುವ ಅಲಾರಾಮ್ ವ್ಯವಸ್ಥೆ ಇರಬೇಕು ಎಂದು ಸೂಚಿಸಿದರು.
ಅನುಮಾನಾಸ್ಪದ ಚಟುವಟಿಕೆ: ಮಳಿಗೆ ಸುತ್ತಮುತ್ತ ಅಥವಾ ಮಳಿಗೆ ಒಳಗೆ ಯಾವುದೇ ವ್ಯಕ್ತಿಗಳ ವರ್ತನೆ ಅನುಮಾನಾಸ್ಪದವೆಂದು ಕಂಡುಬಂದರೆ, ತಡಮಾಡದೇ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪಿಎಸ್ಐ ಪ್ರವೀಣ ಗಂಗೋಳ ಅವರು ತಿಳಿಸಿದರು.
ಪೊಲೀಸ್ ಇಲಾಖೆಯ ಈ ಕ್ರಮವು ಪಟ್ಟಣದ ಆಭರಣ ಮಾಲೀಕರಿಗೆ ಭದ್ರತೆಯ ಬಗ್ಗೆ ಜಾಗೃತಿ ಹೆಚ್ಚಿಸಲು ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಸಹಾಯಕವಾಗಿದೆ.


