ಧಾರವಾಡ: ಕೂಡಲೇ ಬೆಳೆಹಾನಿ, ಬೆಳೆವಿಮೆ ಪರಿಹಾರ ಬಿಡುಗಡೆಗೆ ಆಗ್ರಹಿಸಿ ಸೋಮವಾರ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿಯಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿವರೆಗೆ ಬೈಕ್ ರ್ಯಾಲಿ ನಡೆಸಿ ರೈತರು ಹಾಳಾದ ಹೆಸರು, ಉದ್ದಿನ ಕಾಳುಗಳನ್ನು ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿದ್ದರಿಂದ ರೈತ ಬೆಳೆದ ಹೆಸರು, ಉದ್ದಿನ ಬೆಳೆ ಸಂಪೂರ್ಣ ನಾಶವಾಗಿದೆ. ಹೀಗಾಗಿ ಸರಕಾರ ಕೂಡಲೇ ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಸಚಿವರು, ಶಾಸಕರು ಬೆಳೆ ಹಾನಿ ಸಮೀಕ್ಷೆ ನಡೆಸಿದ್ದಾರೆ. ಆದರೆ ಇದಾಗಿ ಒಂದು ತಿಂಗಳು ಕಳೆದರೂ ರೈತರಿಗೆ ಪರಿಹಾರ ಸಿಕ್ಕಿಲ್ಲ. ನವಲಗುಂದ ಹಾಗೂ ಹುಬ್ಬಳ್ಳಿ ತಾಲೂಕಿನಲ್ಲಿ ಅತೀ ಹೆಚ್ಚು ಬೆಳೆ
ನಾಶವಾಗಿದೆ. ಈ ವಿಚಾರವಾಗಿ ಸರಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದ ರೈತರು ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸರಕಾರ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಈಗ ನಡೆದಿರುವುದು ಸಾಂಕೇತಿಕ ಪ್ರತಿಭಟನೆ. ಪರಿಹಾರ ಸಿಗದಿದ್ದರೆ ಉಗ್ರ ಹೋರಾಟ ಅನಿವಾರ್ಯ ಆಗಲಿದೆ ಎಂದು ಎಚ್ಚರಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಶಿವಾನಂದ ಹೂಗಾರ, ಫಕ್ಕೂ ಯಡ್ರಾವಿ, ಗೂಳಪ್ಪ ತಿರಕಪ್ಪನವರ, ತುಳಸಪ್ಪ ಹುಲಕೋಟಿ, ಶಿವಾನಂದ ನವಲೂರು, ಚನ್ನಪ್ಪ ಕಣ್ಣೂರು, ರಾಜು ಕರಮಡಿ, ರಫೀಕ್ ನದಾಫ್, ಅಲಂ ದರ್ಗಾದ, ರಫೀಕ್ ಕಳ್ಳಿಮನಿ, ಮುದರಣ್ಣ ಕಂಕೊಳ್ಳಿ, ಸುಭಾಷ ಅವಣ್ಣವರ ಇತರೆದು ಪ್ರತಿಭಟನೆಯಲ್ಲಿದ್ದರು.