ಬಳ್ಳಾರಿ,ಆ.೦೧: ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ತಕ್ಷಣವೇ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಮಾಡುವಂತೆ ಶುಕ್ರವಾರದಂದು ಮಾದಿಗ ಸಂಘಟನೆಗಳ ಒಕ್ಕೂಟದ ಬಳ್ಳಾರಿ ಜಿಲ್ಲಾ ಘಟಕದಿಂದ ನಡೆದ ಅರಬೆತ್ತಲೆ ಪ್ರತಿಭಟನೆ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡುವ ಮೂಲಕ ಆಗ್ರಹಿಸಲಾಯಿತು.
ಪರಿಶಿಷ್ಟ ಜಾತಿಗಳ ಸಮುದಾಯದೊಳಗಿನ ಅತೀ ಹಿಂದುಳಿದ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಸಲುವಾಗಿ ಜಾರಿಯಾಗಬೇಕಿರುವ ಒಳ ಮೀಸಲಾತಿಯ ಬೇಡಿಕೆ ಮತ್ತು ಹೋರಾಟ ೩೫ ವರುಷಗಳಿಂದ ನನೆಗುದಿಗೆ ಬಿದ್ದಿದೆ.
ಈ ಅಸಮಾನತೆಯನ್ನು ಸರಿಪಡಿಸಲು,ಆ.೧, ೨೦೨೪ ರ ಸರ್ವೋಚ್ಛ ನ್ಯಾಯಾಲಯದ ತೀರ್ಪು ಸ್ಪಷ್ಟವಾಗಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ೧೦೧ ಸಮುದಾಯಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಆದೇಶವನ್ನು ನೀಡಿದೆ.
ಆದರೆ, ಕರ್ನಾಟಕ ಸರ್ಕಾರವು ಈ ಸರ್ವೋಚ್ಛ ನ್ಯಾಯಾಲಯದ ತೀರ್ಪುನ್ನು ಜಾರಿಗೊಳಿಸಲು ಅನಗತ್ಯವಾಗಿ ವಿಳಂಬ ಮಾಡುತ್ತಿರುವುದು ನಮ್ಮ ಸಮುದಾಯದಲ್ಲಿ ತೀವ್ರ ಅಸಮಾಧಾನ ಮತ್ತು ಆತಂಕಕ್ಕೆ ಕಾರಣವಾಗಿದೆ. ಈ ವಿಳಂಬ ನೀತಿಯಿಂದಾಗಿ ನಮ್ಮ ಸಮುದಾಯದ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ಕಾರ್ಮಿಕರು ಹಾಗೂ ಮಹಿಳೆಯರು ಹಾಗೂ ಒಟ್ಟಾರೆ ಸಮಾಜ ತಮ್ಮ ನ್ಯಾಯಯುತ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ.
ಸುಪ್ರೀAಕೋರ್ಟ್ ತೀರ್ಪಿನ ತರುವಾಯ ಹರಿಯಾಣ , ತೆಲಂಗಾಣ , ಆಂಧ್ರಪ್ರದೇಶ ಸರ್ಕಾರಗಳು ತುರ್ತು ನಿಗಾ ವಹಿಸಿ ತಮ್ಮ ರಾಜ್ಯಗಳಲ್ಲಿ ಒಳಮೀಸಲಾತಿಯನ್ನು ಜಾರಿ ಮಾಡಿ ಸಾಮಾಜಿಕ ನ್ಯಾಯದ ವಿಷಯದಲ್ಲಿ ಮೇಲ್ಪಂಕ್ತಿ ಆಗಿದ್ದಾರೆ . ಆದರೆ ಕರ್ನಾಟಕ ಸರ್ಕಾರ ತೀವ್ರವಾದ ವಿಳಂಬ ನೀತಿ ಅನುಸರಿಸುತ್ತಿದ್ದು ಪರಿಶಿಷ್ಟ ಜಾತಿಗಳಲ್ಲಿ ಅದರಲ್ಲೂ ಮುಖ್ಯವಾಗಿ ಮಾದಿಗ ಮತ್ತು ೨೯ ಉಪಜಾತಿಗಳಲ್ಲಿ ತೀವ್ರ ಜನಾಕ್ರೋಶಕ್ಕೆ ಕಾರಣವಾಗಿದೆ.
ನಾಗಮೋಹನ್ ದಾಸ್ ಆಯೋಗಕ್ಕೆ ಸರ್ಕಾರ ಸರಿಯಾದ ರೀತಿಯಲ್ಲಿ ಸಹಕಾರ ನೀಡುತ್ತಿಲ್ಲ. ಪರಿಶಿಷ್ಟ ಜಾತಿಗಳ ನಡುವೆ ಮೀಸಲಾತಿಯ ಹಂಚಿಕೆಯಲ್ಲಿ ಉಂಟಾಗಿರುವ ಅಸಮಾನತೆ ಮತ್ತು ಸಮುದಾಯಗಳ ನಡುವಿನ ಹಿಂದುಳಿದಿರುವಿಕೆಯನ್ನು ಸಮಗ್ರವಾಗಿ ಅಧ್ಯಯನ ಮಾಡಲು ಆಯೋಗ ಎಲ್ಲ ಇಲಾಖೆಗಳಿಗೆ
ಅಗತ್ಯ ಮಾಹಿತಿಯನ್ನು ಜನವರಿಯಲ್ಲಿ ಕೇಳಿತ್ತು. ಆದರೆ ರಾಜ್ಯ ಸರ್ಕಾರದ ನಿರ್ಲಕ್ಷದಿಂದಾಗಿ ಆರು ತಿಂಗಳಾದರು ಸರಿಯಾದ ಮಾಹಿತಿಗಳು ಆಯೋಗಕ್ಕೆ ಬಂದಿಲ್ಲ. ಕೆಲವು ಇಲಾಖೆಗಳ ಮಾಹಿತಿ ಅಪೂರ್ಣವಾಗಿದೆ. ಆಯೋಗ ನೆಡಸಿದ ಸಮೀಕ್ಷೆ, ಸ್ಟಿಕ್ಕರ್ ಅಂಟಿಸುವ ಪ್ರಕ್ರಿಯೆಗಳು ಗೊಂದಲ ಹುಟ್ಟುಹಾಕಿ ನಗೆಪಾಟಲಿಗೆ ಈಡಾಯಿತು. ಮೂರುವಾರದಲ್ಲಿ ಸಮೀಕ್ಷೆ ಮುಗಿಸಿ ವರದಿ ಸಿದ್ಧಪಡಿಸಲಾಗುವುದು ಎಂಬ ಸರ್ಕಾರದ ಹೇಳಿಕೆ ಕಿಮ್ಮತ್ತು ಕಳೆದುಕೊಂಡಿದೆ.
ಕಾಂತರಾಜ್ ಆಯೋಗದ ಜಾತಿಗಣತಿಯ ವರದಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳ ನಿರ್ಲಕ್ಷ್ಯದಿಂದ ಕೊನೆಗೆ ಕಸದ ಬುಟ್ಟಿ ಸೇರಿತು. ನಾಗಮೋಹನ್ ದಾಸ್ ವರದಿಯ ಬಗೆಗಿನ ಗೊಂದಲಗಳು, ಸರ್ಕಾರದ ನಿರ್ಲಕ್ಷದ ಧೋರಣೆಯ ಬಗ್ಗೆ ಎಚ್ಚರಿಕೆಯ ಘಂಟೆ ಬಾರಿಸುತ್ತಿದ್ದೇವೆ. ಸರ್ಕಾರ ಸರಿದಾರಿಗೆ ಬರಬೇಕು . ತಕ್ಷಣ ಒಳಮೀಸಲಾತಿ ಜಾರಿಮಾಡಬೇಕೆಂಬುದು ನಮ್ಮ ಅಗ್ರಹ. ಆಗಸ್ಟ್ ೧೧ರಿಂದ ಪ್ರಾರಂಭವಾಗುವ ವಿಧಾನ ಮಂಡಲಗಳ ಅಧಿವೇಶನ ಆರಂಭವಾಗುತ್ತಿದ್ದು ಸರ್ಕಾರದ ನಿರ್ಲಕ್ಷ, ವಿಳಂಬ ಧೋರಣೆಯ ಬಗ್ಗೆ ಜನಾಕ್ರೋಶ ಉಗ್ರಸ್ವರೂಪ ತಾಳುವುದು ನಿಶ್ಚಿತ ಎಂದು ಈ ಮೂಲಕ ಎಚ್ಚರಿಸುತ್ತೇವೆ.
ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಸಂಪೂರ್ಣವಾಗಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿಯನ್ನು ಅನುಷ್ಠಾನಗೊಳಿಸಬೇಕು.
ಒಂದು ವೇಳೆ ಸರ್ಕಾರವು ಈ ಗಡುವಿನೊಳಗೆ ನಮ್ಮ ಬೇಡಿಕೆಯನ್ನು ಈಡೇರಿಸಲು ವಿಫಲವಾದರೆ, ನಮ್ಮ ಹಕ್ಕುಗಳಿಗಾಗಿ ಕರ್ನಾಟಕದಾದ್ಯಂತ ಇರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು, ಕಾರ್ಮಿಕರು, ವಕೀಲರು, ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ಒಗ್ಗೂಡಿ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸುವುದು ಅನಿವಾರ್ಯವಾಗುತ್ತದೆ ಎಂಬುದನ್ನು ತಮ್ಮ ಗಮನದಲ್ಲಿ ಇರಲಿ. ಜಿಲ್ಲಾಧಿಕಾರಿಗಳು, ಬಳ್ಳಾರಿ ಜಿಲ್ಲೆ ರವರ ಮೂಲಕ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ಬೆಂಗಳೂರು ರವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳು ನರಸಪ್ಪ, ದುರ್ಗಪ್ಪ ತಳವಾರ್, ಹನುಮಂತಪ್ಪ ಎಸ್ ಜೆ ಕೋಟೆ, ಹೊನ್ನೂರಪ್ಪ, ಈಶ್ವರಪ್ಪ, ಎ.ಕೆ ಹುಲುಗಪ್ಪ, ನರಸಿಂಹ ಬಾಬು, ಮುನಿಸ್ವಾಮಿ ಸಿರುಗುಪ್ಪ, ಮಲ್ಲೇಶ್ ಎಮ್ಮಿಗನೂರು, ಬಾಬು ಕುರುವಳ್ಳಿ, ಮಲ್ಲಿನಾಥ, ತಿಮ್ಮಪ್ಪ ಕೌಲ್ ಬಜಾರ್, ಚೌದರಿ ಶ್ರೀನಿವಾಸ್, ಫಕೀರಯ್ಯ ತೆಕ್ಕಲಕೋಟ, ಆಂಜನೇಯಲು ಕಂಪ್ಲಿ, ಲಕ್ಷ್ಮಣ ಭಂಡಾರಿ, ಬಿ ಈ ರಾಜೇಶ್, ಪ್ರಸಾದ್, ಮಾರಣ್ಣ, ಅರುಣಾಚಲಂ.ವೈ, ಗಾದಿಲಿಂಗ ಗೆಣಿಕೆಹಾಳು, ರಾಜಶೇಖರ ಕುರುಗೋಡು, ಹುಲಿಯಪ್ಪ ಕಪ್ಪಗಲ್, ಪ್ರತಾಪ್ ತಳವಾರ, ಷಣ್ಮುಖ, ಆರ್ ಶಿವಶಂಕರ್, ಸಂತೋಷ್, ಉಮೇಶ್, ಮಲ್ಲಿ ಇಂದಿರಾನಗರ, ಏಸು, ದುರ್ಗಣ್ಣ ಬಂಡಿಹಟ್ಟಿ, ಲೋಕರಾಜ್ ಹಾಗೂ ಮಾದಿಗ ಸಮಾಜದ ಹಲವಾರು ಮುಖಂಡರು ಉಪಸ್ಥಿತರಿದ್ದರು.