ಶ್ರೀ ಧರ್ಮಸ್ಥಳ ಭಕ್ತ ಅಭಿಮಾನಿ ವೇದಿಕೆಯಿಂದ ಸೂಕ್ತ ತನಿಖೆಗೆ ಆಗ್ರಹಿಸಿ ಪ್ರತಿಭಟನೆ I

Ravi Talawar
ಶ್ರೀ ಧರ್ಮಸ್ಥಳ ಭಕ್ತ ಅಭಿಮಾನಿ ವೇದಿಕೆಯಿಂದ ಸೂಕ್ತ ತನಿಖೆಗೆ ಆಗ್ರಹಿಸಿ ಪ್ರತಿಭಟನೆ I
WhatsApp Group Join Now
Telegram Group Join Now
ಧಾರವಾಡ: ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ವೃಥಾ ಕಳಂಕ ತರುವ ದಿಸೆಯಲ್ಲಿ ಪಿತೂರಿ  ನಡೆಸುತ್ತಿರುವ ಬಗ್ಗೆ ಸೂಕ್ತ ತನಿಖೆಯನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ನಗರದಲ್ಲಿ ಶ್ರೀ ಧರ್ಮಸ್ಥಳ ಭಕ್ತ ಅಭಿಮಾನಿ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಕಡಪಾ ಮೈದಾನದಿಂದ ಪ್ರಮುಖ ಬೀದಿಗಳಲ್ಲಿ ರ‍್ಯಾಲಿ ನಡೆಸಿ, ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಲಾಯಿತು. ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯನ್ನು ಅನಾದಿಕಾಲದಿಂದಲೂ ನಮ್ಮ ಪೂರ್ವಿಕರು ಭಕ್ತಿ, ಶ್ರದ್ಧೆಯಿಂದ ಮನೆ ಮನಗಳಲ್ಲಿ ಪೂಜಿಸಿಕೊಂಡು ಬಂದಿದ್ದಾರೆ. ನಾವು  ಕೂಡ ಈ ಪರಂಪರೆಯನ್ನೇ ಮುಂದುವರೆಸಿಕೊಂಡು ಬಂದಿದ್ದೇವೆ. ಅಲ್ಲದೆ ನಮ್ಮ ಕರ್ನಾಟಕದ ಅತ್ಯಂತ ಪ್ರಾಚೀನ ಮತ್ತು ಪುಣ್ಯಕ್ಷೇತ್ರವೆಂದೇ ಹೆಸರುವಾಸಿಯಾಗಿರುವ ದೇವಾಲಯಗಳಲ್ಲಿ ಇದೂ ಒಂದು. ಈ ದೇವಾಲಯಕ್ಕೆ ಸರಿ ಸುಮಾರು ೮೦೦ ವಷಗಳ ಇತಿಹಾಸವಿದೆ. ಶ್ರೀ ಸ್ವಾಮಿಯಲ್ಲಿ ಭಕ್ತರು ಬೇಡಿಕೊಂಡ ಇಷ್ಟ್ಟಾರ್ಥಗಳೂ ನೆರವೇರುವುದು ಎಂಬ ಪ್ರತೀತಿಯೂ ಇದೆ ,ಇದಕ್ಕೆ ನಿದರ್ಶನಗಳೂ ಇವೆ.ಧಾರ್ಮಿಕವಾಗಿ,ಸಾಮಾಜಿಕವಾಗಿ ದೇವರ ಹೆಸರಿನಲ್ಲಿ ಆಗುತ್ತಿರುವ ಅದಷ್ಟೋ ಪುಣ್ಯ ಕಾರ್ಯಗಳನ್ನು ಅಸಂಖ್ಯಾತ ಭಕ್ತರು ಪಡೆದುಕೊಂಡಿರುವುದು ಪ್ರಶಂಸನಾತೀತ.
ಇಂತಹ ಈ ದೇವಾಲಯದ ಮೇಲೆ ಮತ್ತು ಅದರ ಪೀಠಾಧಿಕಾರಿ ಮೇಲೆ ಇತ್ತೀಚಿನ ದಿನಗಳಲ್ಲಿ ಮಹೇಶ ಶೆಟ್ಟಿ ತಿಮರೋಡಿ, ಜಯಂತ ಟಿ, ಗಿರೀಶ ಮಟ್ಟಣ್ಣವರ್, ಸಂತೋಷ ಶೆಟ್ಟಿ ಸಹಚರರು ಸೇರಿ ಅತ್ಯಂತ ಕನಿಷ್ಠ ಮಟ್ಟದ ಭಾಷೆ ಬಳಸಿ ಸಾರ್ವಜನಿಕವಾಗಿ ಅಸಹ್ಯ ಹುಟ್ಟಿಸುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ.
ದೇವಳ ಹಾಗೂ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಹೆಸರಿಗೆ ಕಳಂಕ ತರಬೇಕೆಂದು ಶತಾಯ ಗತಾಯ ವ್ಯವಸ್ಥಿತ ಷಡ್ಯಂತ್ರಗಳನ್ನು ರೂಪಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳುವ ನಿಟ್ಟಿನಲ್ಲಿ ವಿಡಿಯೋ ತುಣುಕುಗಳನ್ನು ಬಿತ್ತರಿಸುತ್ತಿದ್ದಾರೆ. ಇದರಿಂದ  ಕ್ಷೇತ್ರದ ಭಕ್ತರ ಮನಸ್ಸಿಗೆ ಅತೀವ ನೋವಾಗುತ್ತಿದೆ.ನಿರಂತರವಾಗಿ ಸುಳ್ಳು ಸುದ್ದಿಗಳನ್ನು, ಅಪಪ್ರಚಾರಗಳನ್ನು, ಧರ್ಮಾಧಿಕಾರಿಯವರ ಕೆಲಸ ಕಾರ್ಯಗಳ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಮಾಡುತ್ತಾ  ಸಮಾಜವನ್ನು ಒಡೆಯುವ ಹುನ್ನಾರಗೈಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸತತ  ಅಪಪ್ರಚಾರಗಳಿಂದ ಸಮಾಜದ ಒಂದು ವರ್ಗವು ಇದನ್ನು ನಂಬಿಕೊಂಡು ಇವರಿಗೆ ಸಹಕರಿಸುವುದು ಮತ್ತು ಧರ್ಮಸ್ಥಳದ ಭಕ್ತರಾದ ನಮ್ಮನ್ನು ಸಮಾಜದಲ್ಲಿ ಕೀಳಾಗಿ ಬಿಂಬಿಸುತ್ತಿರುವುದು ಸಹಿಸದಂತಾಗಿದೆ.
ಈಗಾಗಲೆ ಅನಾಮಿಕ ವ್ಯಕ್ತಿಯು ನೀಡಿದ ದೂರಿನ ಆಧಾರದಲ್ಲಿ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿದ್ದು,  ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವುದನ್ನು ನಾವೆಲ್ಲರೂ ಗೌರವದಿಂದ ಸ್ವಾಗತಿಸಿದ್ದೇವೆ. ಈ ಮೂಲಕ ನಡೆಯುತ್ತಿರುವ ತನಿಖೆಯು ಅರ್ಥಪೂರ್ಣವಾಗಿ ಕೊನೆಗೊಳ್ಳಬೇಕಿದೆ.
ಇತ್ತ ಅನಾಮಿಕ ದೂರುದಾರನನ್ನು ಬಳಸಿಕೊಂಡು ಗಿರೀಶ ಮಟ್ಟಣ್ಣವರ ಇತರರಿಗೆ ಆಗುವ ಲಾಭಗಳೇನು?.ಸುಳ್ಳು ಆರೋಪ ಮಾಡಲು ಯಾರು ಪ್ರಚೋದನೆ ಮಾಡುತ್ತಿದ್ದಾರೆ?. ಮತ್ತು ಈ ಎಲ್ಲಾ ಕಾರ್ಯಗಳಿಗೆ ಇವರಿಗಿರುವ ಆದಾಯದ ಮೂಲಗಳೇನು?. ಈ ಎಲ್ಲ ಸಂಗತಿಗಳ ಬಗ್ಗೆಯೂ ತನಿಖೆ ಆಗಬೇಕಿದೆ. ಇದಕ್ಕಾಗಿ ಅವರ ಮೊಬೈಲ್‌ಗಳು, ಮನೆ ಹಾಗೂ ನಡೆಸುತ್ತಿರುವ ಕಛೇರಿಗಳನ್ನು ತನಿಖೆಗೊಳಪಡಿಸಬೇಕು.  ಇದಕ್ಕಾಗಿ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ಇನ್ನೊಂದು ತನಿಖಾ ತಂಡವನ್ನು ರಚಿಸಬೇಕು. ಸರಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಸಿದರು.
ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ವಿಜಯಾನಂದ ಶೆಟ್ಟಿ, ಫೀರಾಜಿ ಖಂಡೇಕರ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ರಾಜ್ಯ ಸಮಿತಿ ಸದಸ್ಯ ಶಿವಶಂಕರ ಹಂಪಣ್ಣವರ, ಹೊಟೆಲ್ ಒಡೆಯರ ಸಂಘದ ಅಧ್ಯಕ್ಷ ಮಹೇಶ ಶೆಟ್ಟಿ, ವಸಂತ ಅರ್ಕಾಚಾರ, ಸವಿತಾ ಅಮರಶೆಟ್ಟಿ, ಕರಿಯಪ್ಪ ಅಮ್ಮಿನಭಾವಿ, ತಾರಾದೇವಿ ವಾಲಿ,  ರಮೇಶ ಮಾದೇವಪ್ಪನವರ, ಪ್ರಭಾಕರ ನಾಯಕ. ಅಡಿವೆಪ್ಪ ಹೊನ್ನಪ್ಪನವರ, ಸುರೇಂದ್ರ ದೇಸಾಯಿ, ಮೃತ್ಯುಂಜಯ ಸಾಲಿಮಠ, ದ್ಯಾಮಣ್ಣ ಹುಡೇದ, ಮಹಾವೀರ ದೇಸಾಯಿ, ಶ್ರೀಕಾಂತ ಕ್ಯಾತಪ್ಪನವರ, ಡಾ.ವಿಜಯ ಕುಲಕರ್ಣಿ, ಉದಯ ಶೆಟ್ಟಿ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿದ್ದರು.
WhatsApp Group Join Now
Telegram Group Join Now
Share This Article