ಪುರಸಭೆ ಅಧ್ಯಕ್ಷರ ವಿರುದ್ಧ ಕ್ರಮಕ್ಕೆ ಆಗ್ರಹ: ಜಿಲ್ಲಾಧಿಕಾರಿಗೆ ಮನವಿ: ಅರೆಬೆತ್ತಲೆ, ತಮಟೆ ಮೆರವಣಿಗೆ: ದಲಿತಪರ ಒಕ್ಕೂಟದ ಮುಖಂಡರಿಂದ ಪ್ರತಿಭಟನೆ

Pratibha Boi
ಪುರಸಭೆ ಅಧ್ಯಕ್ಷರ ವಿರುದ್ಧ ಕ್ರಮಕ್ಕೆ ಆಗ್ರಹ: ಜಿಲ್ಲಾಧಿಕಾರಿಗೆ ಮನವಿ: ಅರೆಬೆತ್ತಲೆ, ತಮಟೆ ಮೆರವಣಿಗೆ: ದಲಿತಪರ ಒಕ್ಕೂಟದ ಮುಖಂಡರಿಂದ ಪ್ರತಿಭಟನೆ
WhatsApp Group Join Now
Telegram Group Join Now
ಮುದ್ದೇಬಿಹಾಳ: ಪುರಸಭೆ ಅಧ್ಯಕ್ಷರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿವಿಧ ದಲಿತಪರ ಒಕ್ಕೂಟದ ಸಂಘಟನೆಗಳ ಮುಖಂಡರು ಸೋಮವಾರ ಪಟ್ಟಣದಲ್ಲಿ ಅರೆಬೆತ್ತಲೆ ಮೆರವಣಿಗೆ, ತಮಟೆ ಚಳವಳಿ ಮೂಲಕ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಮತ್ತು ಪುರಸಭೆ ಮುಖ್ಯಾಧಿಕಾರಿ ಅವರಿಗೆ ಸಲ್ಲಿಸಿದರು.
ಅಧ್ಯಕ್ಷ ಮಹಿಬೂಬ ಗೊಳಸಂಗಿ ಅವರು ದಲಿತ ಸಂಘಟನೆಯ ಮುಖಂಡರುಗಳಿಗೆ ಅವಮಾನಿಸಿದ್ದಾರೆ. ತಾಲೂಕು ಪಂಚಾಯಿತಿ ವಸತಿ ಗೃಹಗಳನ್ನು ಪರವಾನಗಿ ಇಲ್ಲದೆ ಕೆಡವಿದ್ದನ್ನು ಆಕ್ಷೇಪಿಸಿದ್ದರಿಂದ ದಲಿತ ಮುಖಂಡರ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಇದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ತಾಪಂ ಅಧೀನದಲ್ಲಿರುವ ಸರ್ಕಾರದ ಆಸ್ತಿಯನ್ನು ಧ್ವಂಸಗೊಳಿಸಿದ್ದಕ್ಕಾಗಿ ಜು.೧೭ರಂದು ತಾಪಂ ಎದುರು ಧರಣಿ ಸತ್ಯಾಗ್ರಹ ನಡೆಸಿ ಮನವಿ ಸಲ್ಲಿಸಲಾಗಿತ್ತು. ಇದಾದ ಮೇಲೆ ಅಧ್ಯಕ್ಷರು ಪ್ರಕಟಣೆ ಮೂಲಕ ದಲಿತ ನಾಯಕ ಹರೀಶ ನಾಟಿಕಾರ ಹಾಗೂ ಸಂಘಟನೆಯ ಮುಖಂಡರುಗಳಿಗೆ ಜಾತ್ರೆಯ ವಿಷಯವಾಗಿ ಜಾತ್ರಾ ಕಮೀಟಿಯಿಂದ ೫ ಲಕ್ಷ ಹಣ ಕೊಡುವ ಬೇಡಿಕೆ ಇಟ್ಟಿದ್ದಾರೆ ಎಂದು ಅರೋಪಿಸಿದ್ದರು. ದಲಿತ ಸಂಘರ್ಷ ಸಮಿತಿ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದ್ದರು. ಇದು ಡಾ.ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಲ್ಲದೆ ನಿತ್ಯ ಪುರಸಭೆಯ ಕಾರ್ಮಿಕರಿಗೆ ಜಾತಿ ನಿಂದನೆ ಮಾಡುತ್ತಾರೆ. ಇವೆಲ್ಲವನ್ನು ವಿರೋಧಿಸಿ ಪ್ರತಿಭಟನೆ ನಡೆಸಬೇಕಾಯಿತು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಗೊಳಸಂಗಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು. ಜಾತಿನಿಂದನೆ, ಅವಹೇಳನಕಾರಿ ಮಾತನಾಡುವ ಇವರ ಮೇಲೆ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು. ತಾಪಂ ವಸತಿ ಗೃಹ ನೆಲಸಮ ಮಾಡಿ ಸರ್ಕಾರದ ಆಸ್ತಿ ಹಾನಿ ಮಾಡಿದ್ದಕ್ಕಾಗಿ ಇವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಇಲ್ಲಸಲ್ಲದ ಆರೋಪ ಮಾಡಿ ದಲಿತ ಮುಖಂಡರ ತೇಜೋವಧೆ ಮಾಡಿದ್ದಕ್ಕಾಗಿ ಇವರ ಮೇಲೆ ಮಾನನಷ್ಟ ಮೊಕದ್ದಮೆ ಜೊತೆಗೆ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು. ಅಧ್ಯಕ್ಷರ ಮೇಲೆ ದೌರ್ಜನ್ಯ, ಗುಂಡಾ, ಕೋಮುಗಲಭೆ ಕೇಸ್‌ಗಳಿದ್ದು ಇವುಗಳನ್ನು ಪರಿಗಣಿಸಿ ಇವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಪಟ್ಟಣದ ಇಂದಿರಾನಗರದಲ್ಲಿರುವ ದಲಿತರ ಶೆಡ್‌ಗಳನ್ನು ನಿರ್ಮಿಸಿಕೊಳ್ಳಲು ಅನುಮತಿ ನೀಡಿ ಶೆಡ್ ತೆರವುಗೊಳಿಸಿದ ಅದ್ಯಕ್ಷರ ಮೇಲೆ ಪ್ರಕರಣ ದಾಖಲಿಸಿಕೊಳ್ಳಬೇಕು ಎನ್ನುವ ಹಕ್ಕೊತ್ತಾಯಗಳನ್ನು ಮನವಿಯಲ್ಲಿ ಮಾಡಲಾಗಿದೆ. ಸ್ಥಳೀಯ ಶಾಸಕರಿಗೂ ಮನವಿ ಪತ್ರದ ಪ್ರತಿ ಸಲ್ಲಿಸಲಾಗಿದೆ.
ಮನವಿ ಸಲ್ಲಿಕೆಗೂ ಮುನ್ನ ಮುಖಂಡರಾದ ಹರೀಶ ನಾಟಿಕಾರ, ಪ್ರಕಾಶ ಚಲವಾದಿ ಸರೂರು, ಬಾಲಚಂದ್ರ ಹುಲ್ಲೂರ ಇನ್ನಿತರರು ಮಾತನಾಡಿ ಅಧ್ಯಕ್ಷರ ನಡೆಯನ್ನು ಉಗ್ರವಾಗಿ ಖಂಡಿಸಿದರು. ಮುಖಂಡರಾದ ಬಸವರಾಜ ಸರೂರು, ಪ್ರಶಾಂತ ಕಾಳೆ, ಬಸವರಾಜ ಚಲವಾದಿ, ಮುತ್ತು ಚಲವಾದಿ, ಸಿದ್ದು ಬಿದರಕುಂದಿ, ರೇವಣಸಿದ್ದಪ್ಪ ನಾಯಕ, ಆನಂದ ಹೊಸಮನಿ, ಶಿವು ಕನ್ನೊಳ್ಳಿ, ಸಂಜು ಬಾಗೇವಾಡಿ, ಗುಂಡಪ್ಪ ಚಲವಾದಿ, ಆನಂದ ಮುದೂರ, ಮಂಜುನಾಥ ಪೂಜಾರಿ, ಸಂಗು ತಮದಡ್ಡಿ, ಸಂತು ಅಜಮನಿ, ಮಲ್ಲು, ಮಾಂತೇಶ ತಮದಡ್ಡಿ, ನಿಂಗಪ್ಪ ತಳವಾರ, ಪರಶುರಾಮ ನಾಲತವಾಡ, ಬಲಭೀಮ ನಾಯಕಮಕ್ಕಳ, ಶಾಂತು ಚೊಂಡಿ, ಮಹಾಂತೇಶ ಬಾಗಲಕೋಟ, ಶಂಕರ ಅಜಮನಿ ಸೇರಿ ಹಲವರು ಇದ್ದರು. ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮನವಿ ಸ್ವೀಕರಿಸಿದರು.
WhatsApp Group Join Now
Telegram Group Join Now
Share This Article