ಮೂಡಲಗಿ ಡಿ., ೨೪-: ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿ ಹಾಗೂ ಹಿಂದೂ ಯುವಕ ದೀಪು ಚಂದ್ರ ದಾಸ್ ರವರ ಬರ್ಬರ ಹತ್ಯೆಯ ಹಿಂದೆ ಚೀನಾ ದೇಶದ ಷಡ್ಯಂತ್ರ ಅಡಗಿದ್ದು, ಎಲ್ಲ ಭಾರತೀಯರು ಎಚ್ಛೆತ್ತುಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದು ಜಿಲ್ಲಾ ಬಜರಂಗದಳ ಬಲೋಪಾಸನದ ಪ್ರಮುಖರಾದ ಶಿವಾನಂದ ಗೊಟೂರ್ ಹೇಳಿದರು.
ಬುಧವಾರದಂದು ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮೂಡಲಗಿ ಘಟಕದ ವತಿಯಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ, ಬಾಂಗ್ಲಾದೇಶದ ಪ್ರಧಾನಿಯ ಪ್ರತಿಕೃತಿ ದಹಿಸುವುದರ ಮೂಲಕ ಮಾತನಾಡಿದ ಅವರು, ನೆರೆಯ ಬಾಂಗ್ಲಾದೇಶದಲ್ಲಿ ಚೀನಾ ಕ್ಕುಮ್ಮಕ್ಕಿನಿಂದ ಕೋಮು ಹಿಂಸಾಚಾರ ಹೆಚ್ಚಾಗಿದ್ದು, ಭಾರತೀಯ ಹಿಂದೂಗಳೆಲ್ಲ ಒಗ್ಗಟ್ಟಾಗಿ ಪ್ರತಿಭಟಿಸದಿದ್ದರೆ ಮುಂದೊಂದು ದಿನ ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ಉಳಿಗಾಲವಿಲ್ಲದೇ, ನಮ್ಮ ಭಾರತ ದೇಶದ ಗಡಿಭಾಗದಲ್ಲಿನ ಅನೇಕ ರಾಜ್ಯಗಳನ್ನೂ ಕೂಡ ಕಳೆದುಕೊಳ್ಳಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಚಿಕ್ಕೋಡಿ ಜಿಲ್ಲಾ ವಿಧಿ ಪ್ರಕೋಷ್ಟ ಪ್ರಮುಖರಾದ ಬಲದೇವ ಸಣ್ಣಕ್ಕಿ ಮಾತನಾಡುತ್ತ, ಮೊದಲು ಪೂರ್ವ ಪಾಕಿಸ್ತಾನವಾಗಿದ್ದ ಬಾಂಗ್ಲಾದೇಶಕ್ಕೆ ೧೯೭೧ರಲ್ಲಿ ಭಾರತ ತನ್ನ ಸಾವಿರಾರು ಸೈನಿಕರ ಬಲಿದಾನದೊಂದಿಗೆ ಪಾಕಿಸ್ತಾನದ ಜೊತೆ ಯುದ್ಧ ಮಾಡಿ ಸ್ವಾತಂತ್ರ್ಯ ಒದಗಿಸಿಕೊಟ್ಟಿದೆ. ಹಿಂದಿನ ಇತಿಹಾಸ ಮರೆತಂತಿರುವ ಬಾಂಗ್ಲಾದೇಶ ಇವತ್ತು ತನ್ನ ದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಹಿಂಸಾಚಾರ ಮಾಡುತ್ತಾ ಹತ್ಯೆ ಗೈಯುತ್ತಿರುವುದು ಖಂಡನಾರ್ಹ ಎಂದು ದೂರಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಪ್ರಕಾಶ್ ಮಾದರ್, ಸದಾಶಿವ ಪಾಟೀಲ್, ಭೀಮಶಿ ಮಂಟೂರ, ಲಕ್ಕಪ್ಪ ನಂದಿ, ಮಾಳಪ್ಪ ನಾಯಕ, ಶಿವಶಂಕರ ಖಾನಾಪೂರ, ಮಾಳಪ್ಪ ಮೆಳವಂಕಿ, ಮಹಾಂತೇಶ ಮುಗಳಖೋಡ, ಶ್ರೀಧರ ಬಡಿಗೇರ, ಶಿವಾನಂದ ಪೂಜೇರಿ, ಸಂಗಯ್ಯ ವಸ್ತ್ರದ, ಮಾರುತಿ ಶಿಂದೇ, ದುಂಡಪ್ಪ ಹಳ್ಳೂರ, ರಾಮಚಂದ್ರ ಪಾಟೀಲ್, ನವೀನ್ ಯಕ್ಕುಂಡಿ, ಸಂತೋ? ನಂದಿ ಸೇರಿದಂತೆ ಅನೇಕ ಬಜರಂಗದಳದ ಕಾರ್ಯಕರ್ತರು ಉಪಸ್ಥಿತರಿದ್ದರು.


