ಬೆಳಗಾವಿ, ಅಕ್ಟೋಬರ್ 25: ಹಾಡಹಗಲೇ ಮನೆಗೆ ನುಗ್ಗಿ ಇಬ್ಬರು ಮಕ್ಕಳ ಕಿಡ್ನ್ಯಾಪ್ (Kidnap) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರು ಆರೋಪಿಗಳನ್ನು ಅಥಣಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂವರ ಪೈಕಿ ಓರ್ವನ ಕಾಲಿಗೆ ಗುಂಡು ಹಾರಿಸಿ ಅರೆಸ್ಟ್ ಮಾಡಲಾಗಿದೆ.
ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಸಾಂಬಾ ರಾವಸಾಬ್ ಕಾಂಬಳೆ, ಜಿಲ್ಲೆಯ ಚಿಕ್ಕೂಡಿ ಮೂಲದ ರವಿಕಿರಣ್ ಕಮಲಾಕರ್ ಹಾಗೂ ಬಿಹಾರ ಮೂಲದ ಶಾರುಖ್ ಶೇಕ್ ಬಂಧಿತ ಆರೋಪಿಗಳು. ಕಿಡ್ನ್ಯಾಪ್ ಆಗಿದ್ದ ಸ್ವಸ್ತಿ(4), ವಿಯೋಮ್(3) ರಕ್ಷಣೆ ಮಾಡಲಾಗಿದೆ.
ಅಥಣಿಯ ಸ್ವಾಮಿ ಫ್ಲಾಟ್ನಲ್ಲಿ ಮನೆಗೆ ನುಗ್ಗಿ ಇಬ್ಬರು ಮಕ್ಕಳನ್ನು ಖದೀಮರು ನಿನ್ನೆ ಕಿಡ್ನ್ಯಾಪ್ ಮಾಡಿದ್ದರು. ಇಂದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಬಂಧನದ ವೇಳೆ ಪಿಎಸ್ಐ ಮತ್ತು ಸಿಬ್ಬಂದಿ ಮೇಲೆ ಕಲ್ಲು ತೂರಿ ಪರಾರಿಗೆ ಯತ್ನಿಸಲಾಗಿದೆ.
ಹೀಗಾಗಿ ಆತ್ಮ ರಕ್ಷಣೆಗೆ ಆರೋಪಿ ಸಾಂಬಾ ಮೇಲೆ ಪೊಲೀಸರಿಂದ ಫೈರಿಂಗ್ ಮಾಡಲಾಗಿದೆ. ಈ ವೇಳೆ ಪಿಎಸ್ಐ ಮತ್ತು ಓರ್ವ ಪೊಲೀಸ್ ಕಾನ್ಸ್ಟೇಬಲ್ ಕೈಗೆ ಗಾಯವಾಗಿದ್ದು, ಇಬ್ಬರನ್ನು ಅಥಣಿ ತಾಲೂಕು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.