ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ತಮ್ಮ ಕುಟುಂಬಸ್ಥರಿಗೆ ಬದಲಿ ನಿವೇಶನ ಪಡೆದ ಪ್ರಕ್ರಿಯೆಯಲ್ಲಿ ಅಕ್ರಮವೆಸಗಿದ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ರಾಜ್ಯಪಾಲರ ಕ್ರಮ ಎತ್ತಿ ಹಿಡಿದಿದ್ದ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನವೆಂಬರ್ 23ಕ್ಕೆ ನಿಗದಿಪಡಿಸಿದೆ.
ಗುರುವಾರ ಹೈಕೋರ್ಟ್‌ನ ಕಲಾಪ ಪ್ರಾರಂಭವಾಗುತ್ತಿದ್ದಂತೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರಿದ್ದ ಪೀಠಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಡಾ.ಅಭಿಷೇಕ್ ಮನು ಸಿಂಘ್ವಿ, ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ, ಈವರೆಗೂ ವಿಚಾರಣೆಗೆ ನಿಗದಿಯಾಗಿಲ್ಲ. ಅಲ್ಲದೆ, ಮೇಲ್ಮನವಿ ವಿಚಾರಣೆ ತುರ್ತಾಗಿದ್ದು, ಶೀಘ್ರದಲ್ಲಿ ವಿಚಾರಣೆಗೆ ನಿಗದಿ ಪಡಿಸಬೇಕು ಎಂದು ಕೋರಿದರು. ವಾದ ಆಲಿಸಿದ ಪೀಠ ಇದೇ 23ಕ್ಕೆ ವಿಚಾರಣೆಗೆ ನಿಗದಿಪಡಿಸಿತು.