ಬೆಳಗಾವಿ ಸುವರ್ಣ ವಿಧಾನಸೌಧ ಡಿ.09 (ಕ.ವಾ.):- ಘಟಪ್ರಭಾ ಬಲದಂಡೆ ಮುಖ್ಯ ಕಾಲುವೆಯಿಂದ ಒಟ್ಟಾರೆ 1,35,381 ಹೆಕ್ಟೇರ್ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಬಲದಂಡೆ ಕಾಲುವೆ ದುರಸ್ತಿ ಹಾಗೂ ಚಿಕ್ಕೋಡಿ ಶಾಖಾ ಕಾಲುವೆ ಆಧುನೀಕರಣ ಕಾಮಗಾರಿಗೆ ರೂ.1,722 ಕೋಟಿ ವೆಚ್ಚದಲ್ಲಿ ವಿಸ್ತೃತ ಯೋಜನಾ ವರದಿಯನ್ನು ರೂಪಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರ ವಿಧಾನಸಭೆಯಲ್ಲಿನ ಪ್ರಶ್ನೋತ್ತರ ಕಲಾಪದಲ್ಲಿ ಬೀಳಿಗಿ ಶಾಸಕ ಜಿ.ಟಿ.ಪಾಟೀಲ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿ ಅವರು ಮಾತನಾಡಿದರು.
ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಸರ್ಕಾರದ ಜಲಶಕ್ತಿ ಮಂತ್ರಾಲಯದ ಕೇಂದ್ರ ಜಲ ಆಯೋಗದ ಆಡಳಿತಾತ್ಮಕ ಅನುಮೋದನೆ ಕೋರಿ ಸಲ್ಲಿಸಲಾಗಿದ್ದು, ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಅನುಮೋದನೆ ದೊರೆತರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ 60:40 ಅನುಪಾತದಲ್ಲಿ ಕಾಮಗಾರಿಯನ್ನು ಅನುಷ್ಠಾನಗೊಳಿಸಲಿದೆ. ಅನುಮೋದನೆ ವಿಷಯವಾಗಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ಮನವಿ ಮಾಡಿದ್ದೇನೆ. ಸ್ಥಳೀಯ ಶಾಸಕರು ಹಾಗೂ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಕಾಮಾಗಾರಿ ಅನುಮೋದನೆ ತರಲು ಪ್ರಯತ್ನಿಸಬೇಕು. ಇದರಿಂದ ಕಾಲುವೆ ಕೊನೆಯ ಭಾಗದವರೆಗೆ ನೀರು ಹರಿಸಲು ಸಾಧ್ಯವಾಗಲಿದೆ. ಈಗಾಗಲೇ ಘಟಪ್ರಭಾ ಎಡದಂಡೆ ಮುಖ್ಯ ಕಾಲುವೆ ದುರಸ್ಥಿ ಕಾರ್ಯ ಪೂರ್ಣಗೊಂಡಿದೆ. ಕಾಲುವೆಯಿಂದ ಒಟ್ಟಾರೆ 1,61,258 ಹೆಕ್ಟೇರ್ ಜಮೀನಿಗೆ ನೀರಾವರೆ ಸೌಲಭ್ಯ ಕಲ್ಪಿಸಲಾಗಿದೆ. ಕಾಲುವೆ ಕೊನೆಯ ಭಾಗದವರೆಗೂ ನೀರು ಹರಿಸಲು ಯಾವುದೇ ತೊಂದರೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕಾಲುವೆಯಿಂದ ರೈತರು ಪಂಪ್‌ಸೆಟ್‌ಗಳ ಮೂಲಕ ಜಮೀನುಗಳಿಗೆ ನೀರು ಹರಿಸಲು ಅವಕಾಶವಿಲ್ಲ. ಸರ್ಕಾರ ಕರ್ನಾಟಕ ನೀರಾವರಿ ಅಧಿನಿಯಮ 2024 ಜಾರಿಗೆ ತಂದಿದ್ದು, ಸ್ಥಳೀಯ ಪೋಲಿಸರ ಮೂಲಕ ಅನಧಿಕೃತ ಪಂಪಸೆಟ್ ತೆರವಿಗೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟ ಪಡಿಸಿದರು.


