ಗೋಕಾಕ: ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿದೆ. ವೃತ್ತಿ ಪಾವಿತ್ರ್ಯತೆ ಕಾಪಾಡಿಕೊಂಡು ಪ್ರಾಮಾಣಿಕವಾಗಿ ಬೋಧನೆ ಮಾಡಿ ಉತ್ತಮ ಭಾವಿ ಪ್ರಜೆಗಳನ್ನು ದೇಶಕ್ಕೆ ಕೊಡುಗೆ ನೀಡಬೇಕೆಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಹೇಳಿದರು.
ನಗರದ ಸತೀಶ್ ಶುಗರ್ಸ್ ಅಕ್ಯಾಡೆಮಿ ಪದವಿ ಮಹಾವಿದ್ಯಾಲಯ ಹಾಗೂ ನಾಯಿಕ ಸುಡೆಂಟ್ ಫೆಡರೇಷನ್ ಪ್ರೌಢ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಶೈಕ್ಷಣಿಕ ಕ್ಷೇತ್ರ ಉದಾರೀಕರಣಕ್ಕಾಗಿ ತಂದೆ, ಸಚಿವರಾದ ಸತೀಶ್ ಜಾರಕಿಹೊಳಿ ಅವರು ಈ ಭಾಗದಲ್ಲಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಉತ್ತಮ ಸಮಾಜ, ಸದೃಢ ದೇಶ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದ್ದು, ವಿದ್ಯಾರ್ಥಿಗಳ ಏಳಿಗೆಗಾಗಿ ಶಿಕ್ಷಕರೊಂದಿಗೆ ನಾವು ಶ್ರಮ ವಹಿಸುತ್ತೇವೆ ಎಂದರು.
ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಕುಲಪತಿ ಪ್ರೊ. ಸಿ. ಎಮ್. ತ್ಯಾಗರಾಜ ಮಾತನಾಡಿ, ನಲವತ್ತು ವರ್ಷಗಳ ಕಾಲ ಶಿಕ್ಷಕನಾಗಿ ಸೇವೆ ಸಲ್ಲಿಸಿ, ಸಾವಿರಾರೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ತೃಪ್ತಿ ನನಗಿದೆ. ಇನ್ನು ಸಚಿವ ಸತೀಶ್ ಜಾರಕಿಹೊಳಿಯವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಬಗ್ಗೆ ಅತ್ಯಂತ ಗೌರವ ಇದೆ. ಅವರು ನಾಯಿಕ ಸುಡೆಂಟ್ ಫೆಡರೇಷನ್ ಮೂಲಕ ಸಾವಿರಾರೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕಾರ್ಯವನ್ನು ಶ್ಲಾಘಿಸಿದರು.
ರಾಜ್ಯ ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಮಾತನಾಡಿ, ಗೋಕಾಕ ತಾಲೂಕಿಗೆ ಈಗಾಗಲೇ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮಂಜೂರಾಗಿದ್ದು, ಸದ್ಯಕ್ಕೆ ಕಾಲೇಜು ಆರಂಭಕ್ಕಾಗಿ ಸತೀಶ್ ಶುಗರ್ಸ್ ಅಕ್ಯಾಡೆಮಿ ಪದವಿ ಮಹಾವಿದ್ಯಾಲಯದ ಕಟ್ಟಡವನ್ನು ಒದಗಿಸೋಣ ಎಂದು ತಂದೆ, ಸಚಿವರಾದ ಸತೀಶ್ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಈ ಕಾಲೇಜು ಆರಂಭವಾದರೆ ಇಲ್ಲಿನ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ದೊರೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸತೀಶ್ ಶುಗರ್ಸ್ ಅಕ್ಯಾಡೆಮಿ ಟ್ರಸ್ಟಿ ವಿಠ್ಠಲ್ ಪರಸನ್ನವರ್, ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ. ಬಳಿಗಾರ, ಸತೀಶ್ ಶುಗರ್ಸ್ ಅಕ್ಯಾಡೆಮಿ ಆಡಳಿತಾಧಿಕಾರಿ ಪ್ರಕಾಶ ಲಕ್ಮೆಟ್ಟಿ, ಮಹೇಶ ಚಿಕ್ಕೋಡಿ ಸೇರಿದಂತೆ ಸತೀಶ್ ಶುಗರ್ಸ್ ಅಕ್ಯಾಡೆಮಿ ಪದವಿ ಮಹಾವಿದ್ಯಾಲಯ ಹಾಗೂ ನಾಯಿಕ ಸುಡೆಂಟ್ ಫೆಡರೇಷನ್ ಪ್ರೌಢ ಶಾಲೆಯ ಶಿಕ್ಷಕರು ಇದ್ದರು.