ಬೆಂಗಳೂರು, ಏಪ್ರಿಲ್ 09: ಆನ್ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ (betting) ಕೇವಲ ನಗರ ಪ್ರದೇಶದಲ್ಲಿ ಮಾತ್ರವಲ್ಲ, ಗ್ರಾಮೀಣ ಪ್ರದೇಶದಲ್ಲೂ ಹರಡಿಕೊಳ್ಳುತ್ತಿದೆ. ಹೀಗಾಗಿ ಈ ಆ್ಯಪ್ಗಳಿಗೆ ಶೀಘ್ರದಲ್ಲೇ ಹೊಸ ಮಾನದಂಡ ತರಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ. ನಗರದಲ್ಲಿ ಟಿವಿ9 ಜೊತೆಗೆ ಮಾತನಾಡಿದ ಅವರು, ಆನ್ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ಗೆ ಕಡಿವಾಣ ಹಾಕಲು ಹೊಸ ಕಾನೂನು ತರುವ ಬಗ್ಗೆ ಚರ್ಚೆ ನಡೆದಿದೆ. ಇವುಗಳಿಂದ ದುರಾಸೆಗೆ ಬೀಳದಂತೆ ನಮ್ಮ ಜನರನ್ನು ಹೇಗೆ ಸಂರಕ್ಷಣೆ ಮಾಡಬೇಕು ಎಂಬುವುದರ ಬಗ್ಗೆ ಸಭೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.
ಈಗಾಗಲೇ ಕಾಯ್ದೆಗಳು ಇವೆ. ಆದರೆ ಕಾಯ್ದೆಗಳನ್ನ ಸಮರ್ಪಕವಾಗಿ ಜಾರಿ ಮಾಡಬೇಕು ಮತ್ತು ಹೆಚ್ಚುವರಿ ಕಾಯ್ದೆಗಳನ್ನ ಸೇರಿಸುವ ಬಗ್ಗೆ ಚರ್ಚೆ ನಡೆದಿದೆ. ಗೇಮಿಂಗ್ ಇಂಡಸ್ಟ್ರಿ ಮತ್ತು ಸಾರ್ವಜನಿಕರು, ಗೃಹ ಇಲಾಖೆ ಮತ್ತು ಕಾನೂನು ಇಲಾಖೆಯಿಂದ ಸಲಹೆ ಪಡೆದು ಒಂದು ಡ್ರಾಫ್ಟ್ ರೆಡಿ ಮಾಡಲು ಗೃಹ ಸಚಿವರು ಆದೇಶ ಕೊಡಲಾಗಿದೆ.