ಪತ್ನಿ ಹೆಸರಿನಲ್ಲಿ ಬದಲಿ ನಿವೇಶನ ಪಡೆದಿರುವ ಮಾಹಿತಿಯನ್ನು ಚುನಾವಣಾ ಸಂದರ್ಭದಲ್ಲಿ ನೀಡಲಾದ ಪ್ರಮಾಣ ಪತ್ರದಲ್ಲಿ ಮುಚ್ಚಿಡಲಾಗಿದೆ. ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಕಾನೂನು ಹೋರಾಟಕ್ಕೆ ಬಿಜೆಪಿ ಪ್ಲಾನ್ ಮಾಡಿದೆ.
ಈ ಬಗ್ಗೆ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೊಡುವಂತೆ ಬಿಜೆಪಿ ನಿಯೋಗ ಮನವಿ ಕೊಡಲಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದರೆ ಬಿಜೆಪಿ ನಾಯಕರು ಖಾಸಗಿ ದೂರು ದಾಖಲು ಮಾಡಲಿದ್ದಾರೆ. 2011ರಲ್ಲಿ ಯಡಿಯೂರಪ್ಪ ವಿರುದ್ಧವೂ ರಾಜ್ಯಪಾಲರು ಖಾಸಗಿ ದೂರು ದಾಖಲು ಮಾಡಲು ಅನುಮತಿ ನೀಡಿದ್ದರು. ಸಿಎಂ ಸಿದ್ದರಾಮಯ್ಯ ಅವರ ವಿರುದ್ಧದ ಈ ಕೇಸ್, ಮುಡಾ ಕುರಿತು ಬಿಜೆಪಿ ಎತ್ತಿರುವ ಅಕ್ರಮದ ಆಪಾದನೆಯ ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.
ಮುಡಾ ಹಗರಣದಲ್ಲಿ ನ್ಯಾಯಾಂಗ ತನಿಖೆಗೆ ನಾವು ಒಪ್ಪುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ. ಮುಡಾ ಹಗರಣ ನ್ಯಾಯಾಂಗ ತನಿಖೆಗೆ ನೀಡಿರುವುದು ಸರಿಯಲ್ಲ. ಸರ್ಕಾರ CBI ತನಿಖೆಗೆ ನೀಡಬೇಕು. ಯಾವುದೇ ಕಾರಣಕ್ಕೂ ನ್ಯಾಯಾಂಗ ತನಿಖೆಯನ್ನು ಒಪ್ಪಲ್ಲ. ಸಿಎಂಗೆ ತಾಕತ್ ಇದ್ದರೆ ಇದನ್ನು ಸಿಬಿಐ ತನಿಖೆಗೆ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ನ್ಯಾಯಾಂಗ ತನಿಖೆ ಅಂತ ನಾಟಕಮಾಡುತ್ತಿದ್ದಾರೆ. ಇದೊಂದು ದೊಡ್ಡ ಹಗರಣ. ಸದನದ ಒಳಗೆ ಹೊರಗೆ ನಾವು ಹೋರಾಟ ಮಾಡುತ್ತೇವೆ. ಸಿಎಂ ರಾಜೀನಾಮೆ ಕೋಡಬೇಕು. ದಲಿತರ ಹೆಸರಲ್ಲಿ ಅಧಿಕಾರಕ್ಕೆ ಬಂದು ದಲಿತರ ಹಣ ದೋಚಿದ್ದಾರೆ. ಕಾಂಗ್ರೆಸ್ ಸರ್ಕಾರದ ಬಂಡವಾಳ ಬಯಲಾಗಿದೆ. ಸಿಎಂ ನೈತಿಕತೆ ಕಳೆದುಕೊಂಡಿದ್ದಾರೆ. ವಾಲ್ಮೀಕಿ ನಿಗಮ ಹಗರಣದಲ್ಲಿ ನಾಗೇಂದ್ರ ಈಗಾಗಲೇ ಇಡಿ ಕಸ್ಟಡಿಯಲ್ಲಿದ್ದಾರೆ. ಸಿಎಂ ಇದಕ್ಕೆ ಉತ್ತರ ಕೊಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.