ಹಾಸನ, ಏಪ್ರಿಲ್ 10: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಹಾಸನದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಗೆ ಎದುರಾಗಿರುವ ಸಂಕಷ್ಟವನ್ನು ನಿವಾರಿಸುವಲ್ಲಿ ಬಿಜೆಪಿ ನಾಯಕರು ಕೊನೆಗೂ ಯಶಸ್ವಿಯಾಗಿದ್ದಾರೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮಾಜಿ ಶಾಸಕ ಪ್ರೀತಂ ಗೌಡ ಮುನಿಸನ್ನು ತಣಿಸುವಲ್ಲಿ ರಾಜ್ಯ ಹಾಗೂ ಹೈಕಮಾಂಡ್ ನಾಯಕರು ಯಶಸ್ವಿಯಾಗಿದ್ದಾರೆ. ಇದರ ಬೆನ್ನಲ್ಲೇ ಮೈತ್ರಿ ಅಭ್ಯರ್ಥಿ ಪ್ರೀತಂ ಗೌಡ ಪರ ಪ್ರಚಾರ ಆರಂಬಿಸಿದ್ದಾರೆ.
ಪ್ರೀತಂ ಗೌಡ ಹಾಸನದ ವಿದ್ಯಾನಗರದಲ್ಲಿ ಮನೆ ಮನೆ ಪ್ರಚಾರ ಆರಂಭಿಸಿದರು. ಬೆಂಬಲಿಗರ ಜೊತೆ ಪ್ರಜ್ವಲ್ ಪರ ಪ್ರಚಾರ ಶುರು ಮಾಡಿದ ಪ್ರೀತಂ ಗೌಡ, ಇದೇ ಮೊದಲ ಬಾರಿಗೆ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ಕರ ಪತ್ರ ನೀಡಿ ಪ್ರಚಾರ ಶುರು ಮಾಡಿದರು.
ಇದಕ್ಕೂ ಮುನ್ನ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಇಲ್ಲಿ ಪ್ರೀತಂ ಗೌಡ ಅಥವಾ ಇನ್ನೊಬ್ಬ ಎಂಬ ವಿಷಯ ಮುಖ್ಯವಲ್ಲ. ಎನ್ಡಿಎ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮ ವಹಿಸಿ ಕೆಲಸ ಮಾಡುತ್ತೇವೆ. ಹೊಳೆನರಸಿಪುರ ವಿಧಾನಸಭಾ ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿಗೆ ಕಾಂಗ್ರೆಸ್ಸಿಗಿಂತ ಎಷ್ಟು ಹೆಚ್ಚು ಮತ ದೊರೆಯುತ್ತದೆಯೋ ಅದಕ್ಕಿಂತ ಒಂದು ಮತ ಹೆಚ್ಚು ದೊರೆಯುವಂತೆ ಹಾಸನದಲ್ಲಿ ನಾವು ಮಾಡುತ್ತೇವೆ. ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
ಬೂತ್ ಮಟ್ಟದ ಪ್ರಚಾರವನ್ನು ಈಗಲೇ ಆರಂಭಿಸುತ್ತಿದ್ದೇವೆ. ಈವರೆಗೆ ಯಾರೂ ಬೂತ್ ಮಟ್ಟದ ಪ್ರಚಾರ ಹಾಸನದಲ್ಲಿ ಶುರು ಮಾಡಿರಲಿಲ್ಲ. ನಾವು ಶುರು ಮಾಡಿದ್ದೇವೆ. ಎನ್ಡಿಎ ಅಭ್ಯರ್ಥಿಯನ್ನು ಗೆಲ್ಲಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇವೆ. ಇದರಲ್ಲಿ ಜೆಡಿಎಸ್, ಬಿಜೆಪಿ ಎಂಬುದು ಬರುವುದಿಲ್ಲ. ನಾವೆಲ್ಲ ಒಗ್ಗಟ್ಟಾಗಿ ಪ್ರಾಮಾಣಿಕವಾಗಿ ಎನ್ಡಿಎ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ ಎಂದು ಅವರು ಹೇಳಿದರು.