ಉಡುಪಿ: ದೇಶದ ಪ್ರಧಾನಮಂತ್ರಿಗಳಾದ ಬಳಿಕ ಇದೇ ಮೊದಲ ಬಾರಿಗೆ ಉಡುಪಿಗೆ ಆಗಮಿಸಿರುವ ನರೇಂದ್ರ ಮೋದಿಯವರನ್ನು ಕರಾವಳಿಯ ಮಂದಿ ಹೂಮಳೆ ಸುರಿಸಿ ಅದ್ದೂರಿಯಾಗಿ ಸ್ವಾಗತ ಕೋರಿದ್ದಾರೆ.
ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ ಮೋದಿಯವರು, ಅಲ್ಲಿಂದ ಸೇನಾ ಹೆಲಿಕಾಪ್ಟರ್’ನಲ್ಲಿ ಉಡುಪಿಯ ಹೆಲಿಪ್ಯಾಡ್’ಗೆ ಬಂದಿಳಿದರು.
ಅಲ್ಲಿಂದ ರೋಡ್ ಶೋ ಆರಂಭವಾಗಿದ್ದು, ದಾರಿಯುದ್ದಕ್ಕೂ ಲಕ್ಷಾಂತರ ಮಂದಿ ಹೂಮಳೆ ಸುರಿಸಿ, ನೆಚ್ಚಿನ ನಾಯಕನಿಗೆ ಸ್ವಾಗತ ಕೋರಿದ್ದಾರೆ.
ಉಡುಪಿಯಿಂದ ಕೃಷ್ಣ ಮಠದವರೆಗೂ ನಡೆಯುತ್ತಿರುವ ರೋಡ್ ಶೋದಲ್ಲಿ ಪ್ರಧಾನಿ ಮೋದಿಯವರು ಅಭಿಮಾನಿಗಳತ್ತ ಕೈ ಬೀಸಿ ಸಾಗಿದ್ದಾರೆ.
ರೋಡ್ ಶೋ ಆರಂಭವಾದಾಗಿನಿಂದಲೂ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಮಂದಿ ನಿಂತು ಜೈಘೋಷ ಹಾಕಿ, ಹೂಮಳೆ ಸುರಿಸಿ, ನೆಚ್ಚಿನ ನಾಯಕನನ್ನು ಹತ್ತರದಿಂದ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.


