ಅಜಿತ್ ದೋವಲ್, ಜೈಶಂಕರ್ ಭೇಟಿಯಾದ ಪ್ರಧಾನಿ ಮೋದಿ; ಕಾಶ್ಮೀರ ಉಗ್ರ ದಾಳಿ ಕುರಿತು ಚರ್ಚೆ

Ravi Talawar
ಅಜಿತ್ ದೋವಲ್, ಜೈಶಂಕರ್ ಭೇಟಿಯಾದ ಪ್ರಧಾನಿ ಮೋದಿ; ಕಾಶ್ಮೀರ ಉಗ್ರ ದಾಳಿ ಕುರಿತು ಚರ್ಚೆ
WhatsApp Group Join Now
Telegram Group Join Now

ಶ್ರೀನಗರ, ಏಪ್ರಿಲ್ 23: ಜಮ್ಮು-ಕಾಶ್ಮೀರದ ಅನಂತ್​ನಾಗ್​ನ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರದ ಪರಿಸ್ಥಿತಿಯನ್ನು ಅವಲೋಕಿಸಲು, ಸೌದಿ ಅರೇಬಿಯಾದಿಂದ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಬುಧವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಸಭೆ ನಡೆಸಿದರು.

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಕೂಡ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಣಿವೆಯಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಅತ್ಯಂತ ಭೀಕರ ದಾಳಿಯ ಬಗ್ಗೆ ದೇಶಾದ್ಯಂತ ಆಘಾತ ಮತ್ತು ಆಕ್ರೋಶ ವ್ಯಕ್ತವಾದ ಹಿನ್ನೆಲೆ, ಮೋದಿ ಹಿಂದಿರುಗಿದ ತಕ್ಷಣ ಅಧಿಕಾರಿಗಳು ಅವರಿಗೆ ಈ ಕುರಿತು ಮಾಹಿತಿ ನೀಡಿದರು.

ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನಲ್ಲಿರುವ ಪ್ರಮುಖ ಪ್ರವಾಸಿ ತಾಣದ ಮೇಲೆ ಮಂಗಳವಾರ ಭಯೋತ್ಪಾದಕರು ದಾಳಿ ನಡೆಸಿದ್ದು, ಕನಿಷ್ಠ 26 ಜನರು ಸಾವನ್ನಪ್ಪಿದ್ದಾರೆ, ಮೃತರಲ್ಲಿ ಬಹುತೇಕರು ಪ್ರವಾಸಿಗರಾಗಿದ್ದಾರೆ ಮತ್ತು ಹಲವು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರಲ್ಲಿ ಯುಎಇ ಮತ್ತು ನೇಪಾಳದ ಇಬ್ಬರು ವಿದೇಶಿಯರು ಮತ್ತು ಇಬ್ಬರು ಸ್ಥಳೀಯರು ಸೇರಿದ್ದಾರೆ ಎಂದು ಅವರು ಹೇಳಿದರು.

ಬುಧವಾರ ಬೆಳಗ್ಗೆ ಮೋದಿ ಸೌದಿ ಅರೇಬಿಯಾ ಪ್ರವಾಸವನ್ನು ಮೊಟಕುಗೊಳಿಸಿ ವಾಪಸ್ ಬಂದಿದ್ದಾರೆ, ಹಾಗೆಯೇ ಗೃಹ ಸಚಿವ ಅಮಿತ್ ಶಾ ಮಂಗಳವಾರ ಸಂಜೆ ಶ್ರೀನಗರಕ್ಕೆ ಧಾವಿಸಿ ಭದ್ರತಾ ಕ್ರಮಗಳನ್ನು ಮುನ್ನಡೆಸಿದರು. ಈ ದಾಳಿಯ ಸಮಯದಲ್ಲಿ ಪುರುಷರ ಪ್ಯಾಂಟ್ ಬಿಚ್ಚಿಸಿ, ಐಡಿ ಪರಿಶೀಲಿಸಿ ಹಿಂದೂಗಳನ್ನು ಮಾತ್ರ ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ಪಾಕಿಸ್ತಾನದ ಸಿಒಎಎಸ್ ಅಸಿಮ್ ಮುನೀರ್ ಹಿಂದೂಗಳ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆದ ಕೆಲವು ದಿನಗಳ ನಂತರ ಈ ದಾಳಿ ನಡೆದಿದೆ.

ಘಟನೆಯ ಹೃದಯ ವಿದ್ರಾವಕ ದೃಶ್ಯ ಆನ್​ಲೈನ್​ನಲ್ಲಿ ಹರಿದಾಡುತ್ತಿದೆ. ಹುಲ್ಲುಹಾಸಿನ ಮೇಲೆ ಉದ್ದಕ್ಕೂ ಮೃತದೇಹಗಳು ಬಿದ್ದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ದಾಳಿಯ ಪ್ರತ್ಯಕ್ಷದರ್ಶಿಗಳು ಭಯೋತ್ಪಾದಕರು ಪ್ರವಾಸಿಗರನ್ನು ಹಿಂದೂಗಳೆಂದು ಕನ್ಫರ್ಮ್​ ಮಾಡಿಕೊಂಡ ಬಳಿಕವೇ ಅವರ ಮೇಲೆ ದಾಳಿ ನಡೆಸಿದ್ದಾರೆ ಎಂದು ಹೇಳಿಕೆ ನೀಡಿದ್ದು, ಈ ದಾಳಿ ಧಾರ್ಮಿಕ ಪ್ರೇರಿತವಾಗಿದೆ ಎಂದಿದ್ದಾರೆ.

ವೈರಲ್ ಆದ ಫೋಟೊವೊಂದರಲ್ಲಿ ನವವಿವಾಹಿತ ಮಹಿಳೆಯೊಬ್ಬಳು ತನ್ನ ಪತಿಯ ಶವದ ಬಳಿ ಅಸಹಾಯಕಳಾಗಿ ಕುಳಿತಿರುವುದನ್ನು ಕಾಣಬಹುದು.

WhatsApp Group Join Now
Telegram Group Join Now
Share This Article