ನವದೆಹಲಿ, ಆಗಸ್ಟ್ 07: ಅಮೆರಿಕದೊಂದಿಗಿನ ಸುಂಕ ಯುದ್ಧದ ನಡುವೆ, ಪ್ರಧಾನಿ ನರೇಂದ್ರ ಮೋದಿಅವರು ದೇಶದ ರೈತ(Farmer)ರ ಪರವಾಗಿ ಮಹತ್ವದ ಹೇಳಿಕೆ ನೀಡಿದ್ದಾರೆ. ‘‘ರೈತರ ಹಿತಾಸಕ್ತಿ ಕಾಪಾಡಲು ಯಾವುದೇ ವೈಯಕ್ತಿಕ ನಷ್ಟಕ್ಕೂ ಸಿದ್ಧ’’ ಎಂದು ಪ್ರಧಾನಿ ಮೋದಿ ಟ್ರಂಪ್ಗೆ ಸವಾಲೆಸೆದಿದ್ದಾರೆ. ‘‘ರೈತರ ಹಿತಾಸಕ್ತಿಗಳನ್ನು ರಕ್ಷಿಸುವುದು ನಮ್ಮ ಪ್ರಮುಖ ಆದ್ಯತೆ, ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿಗಳ ಬಗ್ಗೆ ಭಾರತ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ’’ ಎಂದರು.
‘‘ನಮಗೆ ರೈತರ ಹಿತಾಸಕ್ತಿಯೇ ಪ್ರಮುಖ ಆದ್ಯತೆಯಾಗಿದೆ, ಭಾರತವು ತನ್ನ ರೈತರು, ಜಾನುವಾರು ರೈತರು ಮತ್ತು ಮೀನುಗಾರ ಸಹೋದರ ಸಹೋದರಿಯರ ಹಿತಾಸಕ್ತಿಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ಇದಕ್ಕಾಗಿ ನಾನು ವೈಯಕ್ತಿಕವಾಗಿ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ನನಗೆ ತಿಳಿದಿದೆ ಆದರೆ ನಾನು ಅದಕ್ಕೆ ಸಿದ್ಧನಿದ್ದೇನೆ’’ ಎಂದು ಮೋದಿ ಹೇಳಿದ್ದಾರೆ.
ರೈತರ ಆದಾಯವನ್ನು ಹೆಚ್ಚಿಸುವುದು, ಕೃಷಿ ವೆಚ್ಚವನ್ನು ಕಡಿಮೆ ಮಾಡುವುದು, ಹೊಸ ಆದಾಯದ ಮೂಲಗಳನ್ನು ಸೃಷ್ಟಿಸುವುದು – ಈ ಗುರಿಗಳ ಮೇಲೆ ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು. ನಮ್ಮ ಸರ್ಕಾರವು ರೈತರ ಬಲವನ್ನು ದೇಶದ ಪ್ರಗತಿಯ ಆಧಾರವೆಂದು ಪರಿಗಣಿಸಿದೆ.