ಬೆಂಗಳೂರು, ಏಪ್ರಿಲ್ 28: ಲೋಕಸಭಾ ಚುನಾವಣೆಯ ಎರಡನೇ ಹಂತದ ಮತ ಪ್ರಚಾರ ಕಣದಲ್ಲಿ ಮಾತಿನ ಬಾಣಗಳು ಮತ್ತಷ್ಟು ಬಿರುಸುಗೊಂಡಿದ್ದವು. ಎರಡನೇ ಹಂತದ ಮತದಾನ ನಡೆಯಲಿರುವ 8 ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ ಬೆಳಗಾವಿ, ಶಿರಸಿ, ದಾವಣಗೆರೆ ಹಾಗೂ ಹೊಸಪೇಟೆಯಲ್ಲಿ ಇಂದು ರ್ಯಾಲಿ ಮಾಡಿದರು.
ಒಂದೇ ಸಮಾವೇಶದಲ್ಲಿ ಎರಡೆರಡು ಕ್ಷೇತ್ರಗಳ ಮತದಾರರನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದರು. ಮಾತಿನುದ್ದಕ್ಕೂ ರಾಜ್ಯ ಕಾಂಗ್ರೆಸ್ ಸರ್ಕಾರ, ರಾಹುಲ್ ಗಾಂಧಿ ವಿರುದ್ಧ ಸರಣಿ ವಾಗ್ದಾಳಿ ನಡೆಸಿದರು. ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹತ್ಯೆ, ಬೆಂಗಳೂರು ಕೆಫೆ ಬಾಂಬ್ ಸ್ಫೊಟ, ಪಿತ್ರಾರ್ಜಿತ ಆಸ್ತಿ ತೆರಿಗೆಯೇ ಪ್ರಧಾನಿ ಮೋದಿ ಭಾಷಣದ ಮೇನ್ ಹೈಲೈಟ್ಸ್ ಆಗಿತ್ತು.
ಇಂದು ಬೆಳಗ್ಗೆ ಬೆಳಗಾವಿಯಲ್ಲಿ ಮತಬೇಟೆ ಆರಂಭಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್ನ ತುಷ್ಠೀಕರಣದಿಂದಾಗಿ ಕೆಫೆ ಬಾಂಬ್ ಸ್ಫೋಟವನ್ನು ಸಿಲಿಂಡರ್ ಸ್ಫೋಟ ಅಂದಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಮಾಂಗಲ್ಯ ಸರವನ್ನೂ ಹುಡುಕಿಕೊಂಡು ಬರ್ತಾರೆ ಅಂತಾ ವಾಗ್ದಾಳಿ ಮಾಡಿದ್ದಾರೆ. ಇದೇ ವೇಳೆ ಬೆಳಗಾವಿ ನಮ್ಮ ದೇಶದ ರಾಜ ಮಹಾರಾಜರನ್ನು ಕಾಂಗ್ರೆಸ್ ನಾಯಕರು ಅವಮಾನಿಸಿದ್ದಾರೆ. ಈ ಮೂಲಕ ಛತ್ರಪತಿ ಶಿವಾಜಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮಗೆ ಅವಮಾನಿಸಿದ್ದಾರೆ ಅಂತಾ ರಾಹುಲ್ ಗಾಂಧಿ ವಿರುದ್ಧ ಮೋದಿ ಪರೋಕ್ಷ ವಾಗ್ದಾಳಿ ಮಾಡಿದ್ದಾರೆ.
ಶಿರಸಿಯಲ್ಲಿ ಉತ್ತರ ಕನ್ನಡ ಹಾಗೂ ಧಾರವಾಡ ಕ್ಷೇತ್ರಗಳಲ್ಲಿ ಕ್ಯಾಂಪೇನ್ ಮಾಡಿದ ಪ್ರಧಾನಿ ಮೋದಿ ರಾಮಂದಿರ ವಿಚಾರ ಪ್ರಸ್ತಾಪಿಸುತ್ತಾ ಇಲ್ಲೂ ಕಾಂಗ್ರೆಸ್ ವಿರುದ್ಧ ಮಾತಿನ ಬಾಣ ಪ್ರಯೋಗಿಸಿದ್ದಾರೆ. ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯದಲ್ಲಿ ನಾಚಿಕೆಗೇಡಿನ ಸರ್ಕಾರ ವಿದೆ ಅಂತಾ ವಾಗ್ದಾಳಿ ಮಾಡಿದ್ದಾರೆ.
ಇನ್ನು ಹುಬ್ಬಳ್ಳಿಯಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ, ಕಾಲೇಜು ಆವರಣದಲ್ಲೇ ವಿದ್ಯಾರ್ಥಿನಿ ನೇಹಾ ಹತ್ಯೆ ಮಾಡಲಾಗಿದೆ ಅಂತಾ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ. ಕೆಲ ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ನಮ್ಮ ಒಬ್ಬಳು ಸಹೋದರಿಗೆ ಆಗಿರೋದನ್ನು ನೋಡಿ ಇಡೀ ದೇಶವೇ ಆಘಾತಕ್ಕೊಳಗಾಗಿದೆ. ಕರ್ನಾಟಕದಲ್ಲಿ ಪ್ರತಿಯೊಬ್ಬ ತಂದೆ ತಾಯಿಗೆ ತಮ್ಮ ಹೆಣ್ಣುಮಕ್ಕಳ ಬಗ್ಗೆ ಚಿಂತೆಯಾಗಿದೆ. ಯಾರ ಕಾರಣದಿಂದ? ಕಾಂಗ್ರೆಸ್ನ ಪಾಪದ ಕಾರಣದಿಂದ ಎಂದಿದ್ದಾರೆ.
ಹೊಸಪೇಟೆ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನರೇಂದ್ರ ಮೋದಿ ಇರುವುದು ಸ್ವಂತಕ್ಕಾಗಿ ಅಲ್ಲ, ನಿಮಗಾಗಿ. ಬಳ್ಳಾರಿ ಜನ ಬಿಜೆಪಿಯ ವಿಶ್ವಾಸ, ವಿಕಾಸವನ್ನು ನೋಡಿದ್ದಾರೆ. ಕಾಂಗ್ರೆಸ್ ಪಕ್ಷದ ವಿಶ್ವಾಸಘಾತಕತನ ನೋಡಿದ್ದಾರೆ. ಸುಷ್ಮಾ ಸ್ವರಾಜ್ ಗೆದ್ದಾಗ ಇಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ಕಾಂಗ್ರೆಸ್ ಮೇಡಂ ಇಲ್ಲಿಂದ ಗೆದ್ದು ವಿಶ್ವಾಸಘಾತಕತನ ಮಾಡಿದರು. ಸುಳ್ಳು ಹೇಳುವುದು ಮೋಸ ಮಾಡುವುದು ಕಾಂಗ್ರೆಸ್ ಟ್ರ್ಯಾಕ್ ರೆಕಾರ್ಡ್. ನಿಮ್ಮ ಒಂದೊಂದು ಮತ ಕಾಂಗ್ರೆಸ್ ತಪ್ಪುಗಳಿಗೆ ಪಾಠ ಕಲಿಸಬೇಕು. ನೀವು ಒತ್ತುವ ಕಮಲದ ಬಟನ್ ನೇರವಾಗಿ ಮೋದಿಗೆ ಹೋಗುತ್ತದೆ. ಬಲಿಷ್ಠ ಮೋದಿ ಬಲಿಷ್ಠ ವಿಕಸಿತ ಸರ್ಕಾರಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.