ದೆಹಲಿ, ಆ.31: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಆ.31) ದೆಹಲಿಯ ಭಾರತ ಮಂಟಪದಲ್ಲಿ ನಡೆಯುತ್ತಿರುವ ಜಿಲ್ಲಾ ನ್ಯಾಯಾಂಗದ 2 ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್, ಸಿಜೆಐ (chief justice of india) ಡಿವೈ ಚಂದ್ರಚೂಡ್ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಕಪಿಲ್ ಸಿಬಲ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸುಪ್ರೀಂ ಕೋರ್ಟ್ನ 75 ವರ್ಷಗಳ ಇತಿಹಾಸವು ಕೇವಲ ಒಂದು ಸಂಸ್ಥೆಯ ಪ್ರಯಾಣಕ್ಕಿಂತ ಹೆಚ್ಚು. ಇದು ಭಾರತೀಯ ಸಂವಿಧಾನದ ಪ್ರಯಾಣ ಮತ್ತು ಅದರ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ, ಜೊತೆಗೆ ಪ್ರಜಾಪ್ರಭುತ್ವವಾಗಿ ಭಾರತದ ಬೆಳವಣಿಗೆ ಹಾಗೂ ಪಕ್ವತೆಯನ್ನು ಪ್ರತಿಬಿಂಬಿಸುತ್ತದೆ.
ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಮೋದಿ ಅವರು ಭಾರತದ ಸರ್ವೋಚ್ಚ ನ್ಯಾಯಾಲಯದ ಸ್ಥಾಪನೆಯಾಗಿ 75 ವರ್ಷಗಳ ಸ್ಮರಣಾರ್ಥವಾಗಿ ಅಂಚೆಚೀಟಿ ಮತ್ತು ನಾಣ್ಯವನ್ನು ಅನಾವರಣಗೊಳಿಸಿದರು. ಸುಪ್ರೀಂ ಕೋರ್ಟ್ ಆಯೋಜಿಸಿರುವ ಎರಡು ದಿನಗಳ ಸಮ್ಮೇಳನದಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜಿಲ್ಲಾ ನ್ಯಾಯಾಂಗದಿಂದ 800 ಕ್ಕೂ ಹೆಚ್ಚು ನ್ಯಾಯಧೀಶರು ಭಾಗವಹಿಸಲಿದ್ದಾರೆ.