ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ಸತತ 12ನೇ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿ, ಬಳಿಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ನಡೆಸಿದ ಆಪರೇಷನ್ ಸಿಂಧೂರ್ನಲ್ಲಿ ಸಾಹಸ ತೋರಿಸಿದ ದೇಶದ ಧೈರ್ಯಶಾಲಿ ಸೈನಿಕರಿಗೆ ಅವರು ನಮಸ್ಕರಿಸಿದರು. ಧೈರ್ಯಶಾಲಿ ಸೈನಿಕರಿಗೆ ನಮಸ್ಕರಿಸಲು ನನಗೆ ಅವಕಾಶ ಸಿಕ್ಕಿದೆ ಎಂದು ಅವರು ಹೆಮ್ಮೆಯಿಂದ ಹೇಳಿದರು. ಇದೇ ವೇಳೆ, ಭಾರತವು ಯಾವುದೇ ಪರಮಾಣು ಬೆದರಿಕೆಗಳನ್ನು ಸಹಿಸುವುದಿಲ್ಲ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.
ಮೂರು ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ: ನಮ್ಮ ಸೈನಿಕರು ಶತ್ರುಗಳಿಗೆ ಕಲ್ಪನೆಗೂ ಮೀರಿದ ಭೀಕರ ಹೊಡೆತ ನೀಡಿದರು. ಪಹಲ್ಗಾಮ್ನಲ್ಲಿ ಧರ್ಮದ ಹೆಸರಿನಲ್ಲಿ ದಾಳಿ ಮಾಡಿದ ಭಯೋತ್ಪಾದಕರಿಗೆ ನಾವು ಬಲವಾದ ಪಾಠ ಕಲಿಸಿದ್ದೇವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಆಪರೇಷನ್ ಸಿಂಧೂರ್ ಉತ್ತರವಾಗಿದೆ. ಆಪರೇಷನ್ ಸಿಂಧೂರ್ನಲ್ಲಿ ನಾವು ಮೂರು ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೆವು. ಗುರಿ ಮತ್ತು ಸಮಯದ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನಾವು ಮೂರೂ ಪಡೆಗಳಿಗೆ ಕೊಟ್ಟಿದ್ದೇವೆ” ಎಂದು ಮೋದಿ ಹೇಳಿದರು.
ಪರಮಾಣು ಬೆದರಿಕೆ ಸಹಿಸುವುದಿಲ್ಲ : ಭಯೋತ್ಪಾದನೆ ಮತ್ತು ಭಯೋತ್ಪಾದನೆಯನ್ನು ಬೆಂಬಲಿಸುವವರನ್ನು ನಾವು ಪ್ರತ್ಯೇಕವಾಗಿ ನೋಡುವುದಿಲ್ಲ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದರು. ಯಾವುದೇ ರೀತಿಯ ಭಯೋತ್ಪಾದನೆಯನ್ನು ಸಹಿಸಲಾಗುವುದಿಲ್ಲ. ಅಲ್ಲದೆ, ಭಾರತವು ಪರಮಾಣು ಬೆದರಿಕೆಗಳನ್ನು ಸಹಿಸುವುದಿಲ್ಲ ಎಂದು ಅಣ್ವಸ್ತ್ರ ಬೆದರಿಕೆವೊಡ್ಡುತ್ತಿರು ಪಾಕಿಸ್ತಾನಕ್ಕೆ ಪ್ರಧಾನಿ ಎಚ್ಚರಿಕೆ ನೀಡಿದರು. ಶತ್ರುವನ್ನು ಯಾವಾಗ ಮತ್ತು ಹೇಗೆ ನಾಶ ಮಾಡಬೇಕೆಂದನ್ನು ನಮ್ಮ ಸೈನ್ಯವು ನಿರ್ಧರಿಸುತ್ತದೆ. ನಮ್ಮ ಗುರಿ ತಲುಪಲು ಸೇನೆಯೇ ಎಲ್ಲ ನಿರ್ಧಾರ ಮಾಡುತ್ತದೆ ಎಂದು ಮೋದಿ ತಿಳಿಸಿದರು.