ಕಾಗವಾಡ 19- ಸತ್ಯಾಂಶವನ್ನು ಸಮಾಜಕ್ಕೆ ಮುಟ್ಟಿಸುವ ಮಹತ್ವದ ಕಾರ್ಯ ಪತ್ರಿಕಾ ರಂಗ ಮಾಡುತ್ತಿದೆ ಜೊತೆಗೆ ಸರಕಾರದ ಕಿವಿ ಹಿಂಡುವ ಕಾರ್ಯ ಕೂಡ ಮಾಡುತ್ತಿದೆ ಇದು ಇನ್ನಷ್ಟು ಪರಿಣಾಮಕಾರಿಯಾಗಬೇಕಿದೆ ಎಂದು ಶಾಸಕ ರಾಜು ಕಾಗೆ ಹೇಳಿದರು. ಅವರು ಐನಾಪುರದ ಕೆ.ಆರ್.ಇ.ಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಕಾಗವಾಡ ತಾಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಳಲ್ಲಿನ ನೂನ್ಯತೆಗಳನ್ನು, ಬದಲಾವಣೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವ ಕೆಲಸ ಪತ್ರಿಕೆ ಅಥವಾ ಮಾಧ್ಯಮ ಮಾಡುತ್ತದೆ ಜೊತೆಗೆ ಸಮಾಜದಲ್ಲಾದ ಒಳ್ಳೆಯ ಕಾರ್ಯಗಳ ಸಂದೇಶವನ್ನು ಪತ್ರಕರ್ತರು ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದ ಅವರು ಪತ್ರಿಕೆ, ಟಿವಿ ಮಾಧ್ಯಮ ಇರದೇ ಹೋಗಿದ್ದಲ್ಲಿ ಸಮಾಜದಲ್ಲಿ ಏನಾಗುತ್ತಿತ್ತು ಎನ್ನುವ ಚಿಂತನೆ ಮಾಡಲು ಅಲ್ಲ ಕಲ್ಪನೆ ಕೂಡ ಅಸಾಧ್ಯ ಎಂದರು.
ಸಮಾಜದಲ್ಲಿ ನೈತಿಕತೆ, ಮಾನವೀಯ ಮೌಲ್ಯಗಳನ್ನು ಬಿತ್ತುವ ಕೆಲಸ ಪತ್ರಿಕೆಗಳು ಮಾಡುತ್ತಿವೆ. ಸಮಾಜದ ವ್ಯವಸ್ಥೆ ಹದಗೆಡುತ್ತಿದ್ದು, ಈ ವ್ಯವಸ್ಥೆ ಸುಧಾರಣೆಗೆ ಪತ್ರಿಕೆಗಳೊಂದಿಗೆ ನಾವೂ ಕೈ ಜೋಡಿಸಬೇಕು ಎಂದ ಅವರು ಪತ್ರಕರ್ತರು ಸಾಮಾಜಿಕ ನ್ಯಾಯವನ್ನು ಬೆಂಬಲಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಚಿದಾನಂದ ಸವದಿ, ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ, ಸಮಾಜದ, ಸರಕಾರದ ಅಂಕುಡೊಂಕುಗಳನ್ನು ಹೊರ ತರುವ ಪತ್ರಕರ್ತರ ಕಾರ್ಯ ಮೆಚ್ಚುವಂತಹದ್ದಾಗಿದೆ. ಇತ್ತೀಚಿಗೆ ಕೆಲ ಕೊಲೆ ಮತ್ತು ಅಪರಾಧಿಕರಣ ಪ್ರಕರಣಗಳನ್ನು ವೈಭವಿಕರಿಸಲಾಗುತ್ತಿದೆ ಇದರಿಂದ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟು ಮಾಡುತ್ತಿವೆ ಎಂದ ಅವರು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಸುದ್ದಿಗಳನ್ನು ಭಿತ್ತರಿಸಬೇಕೆಂದರು.
ಕೆಲ ಅನಧಿಕೃತ ವ್ಯಕ್ತಿಗಳು ಪತ್ರಕರ್ತರೆಂದು ಹೇಳಿಕೊಂಡು ಸರಕಾರಿ ಅಧಿಕಾರಿಗಳಿಗೆ ಕಿರಿ ಕಿರಿ ಉಂಟು ಮಾಡುತ್ತಿದ್ದಾರೆ ಇದರಿಂದ ಅಧಿಕಾರಿಗಳು ಸರಕಾರಿ ಕೆಲಸ ನಿರ್ವಹಿಸುವುದೇ ಕಷ್ಟಕರವಾಗಿದ್ದು, ಇಂತಹ ಅನಧಿಕೃತ ಪತ್ರಕರ್ತರನ್ನು ಪತ್ರಕರ್ತರ ಸಂಘಗಳು ನಿಯಂತ್ರಿಸಬೇಕು ಇಲ್ಲದೇ ಹೋದಲ್ಲಿ ನಿಷ್ಠಾವಂತ ಪತ್ರಕರ್ತರಿಗೆ ಕೆಟ್ಟ ಹೆಸರು ಬರುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದರು.
ಸದಲಗಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ವೀರೇಶ ಪಾಟೀಲ ಮಾತನಾಡಿ, ಸಂವಿಧಾನಾತ್ಮಕವಾಗಿ ಪ್ರಮುಖವಾಗಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಜೊತೆಗೆ ಪತ್ರಿಕಾ ರಂಗವೂ ಕೂಡ ನಾಲ್ಕನೇ ಮಹತ್ವದ ಅಂಗ ಎಂದು ಪರಿಗಣಿಸಲಾಗಿದೆ. ಮಹರ್ಷಿ ನಾರದರು ವಿಶ್ವದ ಮೊದಲ ಪತ್ರಕರ್ತರಾಗಿದ್ದರು ಅವರು ಸ್ವರ್ಗ, ನರಕ, ಭೂ ಲೋಕಗಳಲ್ಲಿ ದೇವತೆಗಳ, ರಾಕ್ಷಸರ ಮತ್ತು ಮಾನವರ ಮಧ್ಯ ಸುದ್ದಿ ಮುಟ್ಟಿಸುತ್ತಿದ್ದ ಇವರು ಇಂದಿನ ಪತ್ರಕರ್ತರಂತೆಯೇ ಕಾರ್ಯನಿರ್ವಹಿಸಿದ್ದರು.
ಕಾಲ ಕ್ರಮೇಣ ಪತ್ರಕರ್ತರ, ಪತ್ರಿಕೆಗಳ ವ್ಯಾಪ್ತಿ, ಸ್ವರೂಪ ಬದಲಾಗುತ್ತ ಬಂದಿದೆ. ಡಂಗುರ ಸಾರಿ ಜನರಿಗೆ ಸುದ್ದಿ ತಿಳಿಸುವುದನ್ನು ಹಿಡಿದು ಇಲ್ಲಿಯವತೆಗಿನ ಬ್ರೆಕ್ಕಿಂಗ ಸುದ್ದಿಯವರೆಗೆ ಬೆಳೆಯಿತು ಆದರೆ ಅಂದಿನಿಂದ ಇಂದಿನ ವರೆಗೂ ಸಮಾಜಕ್ಕೆ ಶಿಕ್ಷಣ ನೀಡುವಂತಹ ಮತ್ತು ಜಾಗೃತಿ ಮೂಡಿಸುವ ಕೆಲಸದಲ್ಲಿಯೇ ತಮ್ಮನ್ನು ತಾವು ತೊಡಗಿಸಿಕೊಂಡಿವೆ ಎಂದ ಅವರು ಗಾಳಿ ಸುದ್ದಿ ನಂಬಿ ಅನಧಿಕೃತ ಸುದ್ದಿಗಳನ್ನು ಬಿತ್ತರಿಸುವುದನ್ನು ನಿಲ್ಲಿಸಬೇಕು ಇಲ್ಲದಿದ್ದಲ್ಲಿ ಪತ್ರಿಕಾ ರಂಗ ಮಹತ್ವ ಕಳೆದುಕೊಳ್ಳುತ್ತದೆ ಎಂದರು.
ಸಾನಿಧ್ಯ ವಹಿಸಿದ್ದ ಕವಲಗುಡ್ಡ / ಹಣಮಾಪುರದ ಸಿದ್ಧಾಶ್ರಮದ ಶ್ರೀ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಮಾತನಾಡಿ, ಪತ್ರಕರ್ತರು ಒಳ್ಳೆಯ ಸಂದೇಶಗಳನ್ನು ತಲುಪಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದಿಂದ ಪೌರ ಕಾರ್ಮಿಕರನ್ನು ಗೌರವಿಸಲಾಯಿತು. ಸಾನಿಧ್ಯವನ್ನು ಐನಾಪುರ, ಕೃಷ್ಣಾ ಕಿತ್ತೂರ ಗುರುದೇವಾಶ್ರಮದ ಶ್ರೀ ಬಸವೇಶ್ವರ ಸ್ವಾಮೀಜಿ, ಅಧ್ಯಕ್ಷತೆಯನ್ನು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುರೇಶ ಕಾಗಲಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತಾಲೂಕಾ ದಂಡಾಧಿಕಾರಿ ರವೀಂದ್ರ ಹಾದಿಮನಿ, ಅತಿಥಿಗಳಾಗಿ ತಾ.ಪಂ ಅಧಿಕಾರಿ ವೀರಣ್ಣಾ ವಾಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡುರಂಗ ಮಗದುಮ್, ಶಿಶು ಅಭಿವೃದ್ಧಿ ಅಧಿಕಾರಿ ಸಂಜೀವಕುಮಾರ ಸದಲಗೆ, ಕೆ.ಆರ್.ಇ.ಎಸ್.ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಸಂಜೀವ ಭಿರಡಿ, ಅರಳಿಹಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಬಸನಗೌಡ ಪಾಟೀಲ, ವಲಯ ಅರಣ್ಯಾಧಿಕಾರಿ ರಾಕೇಶ ಅರ್ಜುನವಾಡ, ಪ.ಪಂ ಮುಖ್ಯಾಧಿಕಾರಿ ಮಹಾಂತೇಶ ಕೌಲಾಪುರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಆಗಮಿಸಿದ್ದರು.
ಕಾರ್ಯನಿರತ ಪತ್ರಕರ್ತರ ಸಂಘದ ಸುಕುಮಾರ ಬನ್ನೂರೆ, ಸಿದ್ಧಯ್ಯ ಹಿರೇಮಠ, ಸಚೀನ ಕಾಂಬಳೆ, ವಿಜಯಮಹಾಂತೇಶ ಅರಕೇರಿ, ಮುರುಘೇಶ ಗಸ್ತಿ, ಬಸವರಾಜ ತಾರದಾಳೆ, ಅಮರ ಕಾಂಬಳೆ, ಪ್ರಭಾಕರ ಗೊಂಧಳಿ, ರಘುನಾಥ ದೇಶಿಂಗಕರ ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು.