ಮೈಸೂರು, ಆಗಸ್ಟ್.12: ನಾಡಹಬ್ಬ ದಸರಾ ಮಹೋತ್ಸವದ ಗಜಪಯಣ ಆ.21ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿದ್ಧತೆ ಆರಂಭಿಸಿದೆ. ಸದ್ಯ ದಸರಾಗಾಗಿ 18 ಆನೆಗಳನ್ನು ಅರಣ್ಯ ಇಲಾಖೆ ಗುರುತಿಸಿದ್ದು 2 ತಿಂಗಳ ಮುಂಚಿತವಾಗಿ ಮೈಸೂರಿಗೆ ಗಜಪಡೆ ಆಗಮಿಸಲಿದೆ. ಆಗಸ್ಟ್ 21ರಂದು ಮೈಸೂರಿಗೆ ಗಜಪಯಣ ನಿಗದಿ ಹಿನ್ನೆಲೆ ನಾಲ್ಕು ಹೆಚ್ಚುವರಿ ಆನೆಗಳನ್ನು ಸಹ ಇಲಾಖೆ ಗುರುತಿಸಿದೆ
ಈ ಬಾರಿಯೂ ಅಂಬಾರಿ ಹೊರುವ ಜವಾಬ್ದಾರಿಯನ್ನು ಅಭಿಮನ್ಯು ಹೆಗಲಿಗಿದೆ. 14 ಆನೆಗಳ ಪೈಕಿ ಮೊದಲ ಹಂತದಲ್ಲಿ 9 ಆನೆಗಳು ಆಗಮಿಸಲಿದ್ದು ಎರಡನೇ ಹಂತದಲ್ಲಿ ಐದು ಆನೆಗಳನ್ನು ಕರೆ ತರಲು ತಯಾರಿ ನಡೆಯುತ್ತಿದೆ. ಮೊದಲ ಹಂತದಲ್ಲಿ ಕ್ಯಾಪ್ಟನ್ ಅಭಿಮನ್ಯು, ಭೀಮ, ಏಕಲವ್ಯ, ವರಲಕ್ಷ್ಮೀ, ಧನಂಜಯ, ಗೋಪಿ, ರೋಹಿತ, ಕಂಜನ್ ಆಗಮಿಸಲಿದ್ದು ಬಳಿಕ ಪ್ರಶಾಂತ, ಸುಗ್ರೀವ, ಮಹೇಂದ್ರ, ಲಕ್ಷ್ಮೀ, ಹಿರಣ್ಯ ಆಗಮಿಸಲಿದ್ದಾರೆ.
ಈ ಬಾರಿಯೂ ಒಟ್ಟು 14 ಆನೆಗಳನ್ನು ವಿವಿಧ ಶಿಬಿರಗಳಿಂದ ಕರೆತರಲಾಗುತ್ತಿದೆ. ಮೊದಲ ತಂಡದ 9 ಆನೆಗಳಿಗೆ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ 21ರಂದು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಡಲಾಗುತ್ತದೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಅವರು ಮಾಹಿತಿ ನೀಡಿದ್ದಾರೆ.
‘ಎರಡನೇ ತಂಡದಲ್ಲಿ 5 ಆನೆಗಳಿರಲಿದ್ದು, 4 ಆನೆಗಳನ್ನು ತುರ್ತು ಸನ್ನಿವೇಶಗಳಿಗೆ ಮೀಸಲಿರಿಸಲಾಗಿದೆ. ಆ.12ರಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ಮಾನವ – ಆನೆ ಸಂಘರ್ಷ ನಿರ್ವಹಣೆ ಕುರಿತ ಅಂತರರಾಷ್ಟ್ರೀಯ ಸಮಾವೇಶ ನಡೆಯಲಿದ್ದು, ಅಂದು ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ದಸರಾ ಉನ್ನತ ಮಟ್ಟದ ಸಭೆಯೂ ನಡೆಯಲಿದೆ ಎಂದು ತಿಳಿಸಿದ್ದಾರೆ.