ಕುಟುಂಬದ ಸದಸ್ಯರಿಗೆ ಗರ್ಭಿಣಿಯರಿಗೆ ಆರೈಕೆಯ ಮಹತ್ವ ಕುರಿತು ನಿರಂತರವಾಗಿ ಮಾಹಿತಿ ನೀಡುವ ಮೂಲಕ ಮನವೊಲಿಸಿ ಶಿಶು ಮರಣ ಹಾಗೂ ತಾಯಿ ಮರಣ ತಡೆಗೆ ಕ್ರಮವಹಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಯಲ್ಲಾ ರಮೇಶಬಾಬು ತಿಳಿಸಿದರು.
ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ ಗರ್ಭಿಣಿಯರ ಆರೋಗ್ಯ ತಪಾಸಣೆಯನ್ನು ಖುದ್ದು ಕೈಗೊಂಡು ತಪಾಸಣೆಗೆ ಆಗಮಿಸಿದ್ದ ತಾಯಂದಿರೊಂದಿಗೆ ಮಾತನಾಡುತ್ತಾ
ಗಂಡಾಂತರ ಗರ್ಭಿಣಿಯರು ಎಂದು ಗುರ್ತಿಸಿದ ನಂತರ ಅಂದರೆ ಚೊಚ್ಚುಲು ಗರ್ಭಿಣಿ, ಎತ್ತರ ಕಡಿಮೆ, ಅಧಿಕ ರಕ್ತದೊತ್ತಡ, ರಕ್ತದಲ್ಲಿ ಕಬ್ಬಿಣಾಂಶ ಕೊರತೆ, ಅವಳಿಜವಳಿ ಗರ್ಭಣಿ, ವಿವಾಹವಾಗಿ ಐದಕ್ಕಿಂತ ಹೆಚ್ಚು ವರ್ಷಗಳ ನಂತರ ಗರ್ಭಿಣಿಯಾಗಿರುವುದು, ಮೊದಲ ಹೆರಿಗೆ ಸಿಸೇರಿಯನ್, ಮುಂತಾದ ಕಾರಣಗಳಿದ್ದರೆ ದಯವಿಟ್ಟು ನಿರ್ಲಕ್ಷಿಸಿಸಬೇಡಿ, ಅಲ್ಲದೆ ತೀವ್ರ ರಕ್ತಹೀನತೆಯಂತಹ ಸನ್ನಿವೇಶದಲ್ಲಿ ಸ್ಥಳೀಯವಾಗಿ ನೀಡುವ ಚಿಕಿತ್ಸೆಯಿಂದ ( ಐಎಫ್‌ಎ ಮಾತ್ರೆ, ಐರನ್ ಸುಕ್ರೋಸ್, ರಕ್ತ ಹಾಕಿಸುವಿಕೆ ) ಸುಧಾರಣೆಯಾಗದಿದ್ದಲ್ಲಿ ತಜ್ಞರ ಬಳಿ ತಪ್ಪದೆ ಕಳುಹಿಸುವುದು. ಅಗತ್ಯವಿದ್ದಲ್ಲಿ ಸ್ಕ್ಯಾನ್ ಮಾಡಿಸುವುದು. ಮೊದಲ ಹೆರಿಗೆ ಶಸ್ತ್ರಚಿಕಿತ್ಸೆ ಮೂಲಕವಾದಲ್ಲಿ ಪುನಃ ಗರ್ಭಿಣಿಯಾಗುವ ಅವಧಿಯನ್ನು ಕನಿಷ್ಟ 3 ವರ್ಷಕ್ಕೆ ಕಡ್ಡಾಯವಾಗಿ ಮುಂದುಡುವುದು, ಇದಕ್ಕಾಗಿ ಅಂತರ ಚುಚ್ಚುಮದ್ದು, ಕಾಪರ-ಟಿ, ನೀರೊಧ ಕುರಿತು ಆರೋಗ್ಯ ಶಿಕ್ಷಣ ನೀಡಲು ಮರೆಯಬಾರದು, ಅತಿ ಮುಖ್ಯವಾಗಿ ಗರ್ಭಿಣಿಗೆ ಮೇಲ್ಮಟ್ಟದ ಆಸ್ಪತ್ರೆಗೆ ರೇಫರ್ ಮಾಡುವಾಗ 108 ಆರೋಗ್ಯ ಕವಚ ಬರುವ ಸಮಯ ತಡವಾಗುವ ಸಾಧ್ಯತೆ ಇದ್ದಲ್ಲಿ ತಕ್ಷಣ ವೈದ್ಯಾಧಿಕಾರಿಗಳು ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಮುಂದುವರೆದು ರಕ್ತಹೀನತೆ ಎಂದು ಕಂಡು ಬಂದಲ್ಲಿ ಐರನ್ ಸುಕ್ರೋಸ್ 200 ಮೀಲಿಗ್ರಾಮ್ ಪ್ರತಿ ಮೂರು ದಿನಕ್ಕೊಮ್ಮೆ 05 ಇಂಜಕ್ಷನ್ ಕೊಡಿಸಬೇಕು, ಆಹಾರದಲ್ಲಿ ಸ್ಥಳೀಯವಾಗಿ ದೊರಕುವ ತರಕಾರಿ, ತಪ್ಪಲು ಪಲ್ಯ, ಹಣ್ಣುಗಳನ್ನು ಹೆಚ್ಚು ಸೇವಿಸಲು ತಿಳಿಸಿಬೇಕು,ವೈದ್ಯಾಧಿಕಾರಿಗಳು ತಮ್ಮ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಗಂಡಾಂತರ ಗರ್ಭಿಣಿಯರ ಮನೆ ಬೇಟಿ ಹಾಗೂ ಆರೋಗ್ಯದ ಸ್ಥಿತಿ ಕುರಿತು ಪ್ರತಿವಾರ ಚರ್ಚಿಸುವುದು.
ಹೆರಿಗೆ ವಿಷಯವನ್ನು ಆದ್ಯತೆ ಇಟ್ಟುಕೊಂಡು ಸ್ಥಳೀಯ ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಸಮನ್ವಯ ಸಭೆ ಕೈಗೊಳ್ಳುವುದು. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೆರಿಗೆಗೆ ಗರ್ಭಿಣಿ ಬಂದಾಗ ಅಗತ್ಯ ಪರೀಕ್ಷೆ ಮೂಲಕ ಹೆರಿಗೆ ನಿರ್ವಹಿಲು ಸಾಧ್ಯತೆ ಅಥವಾ ಗಂಭೀರತೆ ಕಂಡು ಬಂದರೆ ತಡ ಮಾಡದೆ ಸಿಬ್ಬಂದಿ ಸಹಿತ ರೇಫರ್ ಮಾಡುವುದನ್ನು ಮರೆಯಬಾರದು, ಧಾರ್ಮಿಕ ಸ್ಥಳಗಳಿಗೆ ಗರ್ಭಿಣಿಯರು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಪದೆ ಪದೆ ಬೇಟಿ ನೀಡುತ್ತಿದ್ದರೆ ಅಂತ ಧಾರ್ಮಿಕ ಕೇಂದ್ರಗಳ ಸ್ವಾಮಿಜಿಯರನ್ನು ಬೇಟಿ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸೂಚಿಸುವಂತೆ ತಪ್ಪದೆ ವಿನಂತಿಸಬೇಕು.
ಆಕಸ್ಮಿಕ ಘಟನೆಗಳಲ್ಲಿ ಗರ್ಭಿಣಿಯರ ಆರೈಕೆಗೆ ಯಾರು ಇಲ್ಲದಿದ್ದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾಹಿತಿ ತಿಳಿಸಿ ಆರೈಕೆ ಕೇಂದ್ರಕ್ಕೆ ಕಳುಹಿಸಬೇಕು. ಹಬ್ಬ, ಜಾತ್ರೆ, ಊರ ದೇವರ ಪೂಜೆ, ಮುಂತಾದ ಆಚರಣೆಯ ಮಾಡುವಾಗ ಗರ್ಭಿಣಿಯ ಸಕಾಲದಲ್ಲಿ ಆಗಬೇಕಾದ ತಪಾಸಣೆಗೆ ಅಡಚಣೆಯಾಗದಂತೆ ಪಾಲಕರ ಮನವೊಲಿಸಲು ಮೊದಲ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ ನಾರಾಯಣ ಬಾಬು, ಡಾ ಪ್ರಿಯಾಂಕ, ಶುಶ್ರೂಷಣಾಧಿಕಾರಿ ಪ್ರೇಮಾ, ಅನ್ನಪೂರ್ಣ ಸೇರಿದಂತೆ ಸಿಬ್ಬಂದಿಯವರು ತಾಯಂದಿರು ಉಪಸ್ಥಿತರಿದ್ದರು.