ಧಾರವಾಡ: ಡಿ ಕ್ರಿಯೇಷನ್ ನಿರ್ಮಾಣದ ದೂರ ತೀರ ಯಾನ ಸಿನಿಮಾದ ಬಿಡುಗಡೆ ಪೂರ್ವ ಪ್ರಿಮಿಯರ್ ಶೋ ಧಾರವಾಡದ ಪದ್ಮಾ ಚಿತ್ರಮಂದಿರದಲ್ಲಿ ಯಶಸ್ವಿಯಾಗಿ ನಡೆಯಿತು.
ಹೌಸ್ ಫುಲ್ ಪ್ರೇಕ್ಷಕರ ಮಧ್ಯೆ ನಡೆದ ಪ್ರಿಮಿಯರ್ ಶೋಗೆ ಮೇಯರ್ ಜ್ಯೋತಿ ಪಾಟೀಲ ಚಾಲನೆ ನೀಡಿ, ಸಿನಿಮಾ ವೀಕ್ಷಿಸಿದರು.
ಸಿನಿಮಾದ ನಿರ್ದೇಶಕ ಮಂಸೋರೆ, ನಿರ್ಮಾಪಕ ದೇವರಾಜ್ ಆರ್., ನಾಯಕ ವಿಜಯಕೃಷ್ಣ, ನಾಯಕಿ ಪ್ರಿಯಾಂಕ ಕುಮಾರ, ನಟರಾದ ಪಿ.ಡಿ. ಸತೀಶ್ಚಂದ್ರ, ಕೃಷ್ಣ ಹೆಬ್ಬಾಳ ಸೇರಿದಂತೆ ಸಿನಿಮಾದ ತಾರಾ ಬಳಗದವರು ಸಹ ಉಪಸ್ಥಿತರಿದ್ದು,ಪ್ರೇಕ್ಷಕರೊಂದಿಗೆ ಸಿನಿಮಾ ವೀಕ್ಷಿಸಿದರು.
ಪ್ರೇಮ ಕಥೆಯೊಂದರ ಎಳೆಯಿಟ್ಟುಕೊಂಡ ಸಿನಿಮಾ, ಬೆಂಗಳೂರಿನಿಂದ ಆರಂಭಗೊಂಡು, ಗೋವಾದಲ್ಲಿ ಕ್ಲೈಮ್ಯಾಕ್ಸ್ ಮೂಲಕ ಅಂತ್ಯಗೊಳ್ಳುತ್ತದೆ. ಬೆಂಗಳೂರಿನಿಂದ ಗೋವಾಗೆ ಹೋಗುವ ಪ್ರವಾಸದ ದೃಶ್ಯಗಳು, ಪ್ರಕೃತಿ ಸೌಂದರ್ಯ, ನದಿ, ಸಮುದ್ರಗಳು ಸಿನಿಮಾದಲ್ಲಿ ಕಣ್ಮನ ಸೆಳೆದವು.
ಸಿನಿಮಾ ಪ್ರದರ್ಶನದ ಬಳಿಕ ಸಾಹಿತಿಗಳಾದ ರಾಘವೇಂದ್ರ ಪಾಟೀಲ, ಹ.ವೆಂ. ಕಾಖಂಡಕಿ, ರಾಜಕುಮಾರ ಅಭಿಮಾನಿಗಳ ಒಕ್ಕೂಟದ ಮುಖಂಡ ಶಿವಾನಂದ ಮುತ್ತಣ್ಣವರ, ಶಂಕರ ಹಲಗತ್ತಿ, ವಿಶ್ವೇಶ್ವರಿ ಹಿರೇಮಠ, ಮತ್ತಿತರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಪ್ರೇಕ್ಷಕರನ್ನುದ್ದೇಶಿಸಿ ನಿರ್ದೇಶಕ ಮಂಸೋರೆ ಮಾತನಾಡಿ, ಪ್ರಿಮಿಯರ್ ಶೋವನ್ನು ಬೆಂಗಳೂರಿನಿಂದ ಹೊರಗೆ ಇದೇಮೊದಲ ಸಲ ಮಾಡಿದ್ದೇವೆ. ಮೊದಲ ಸಲ ನಟಿಸಿರುವ ನಟಿಯ ಸಿನಿಮಾಗೆ ಇಷ್ಟೊಂದು ಪ್ರತಿಕ್ರಿಯೆ ಬೇರೆ ಎಲ್ಲಿಯೂ ಸಿಕ್ಕಿಲ್ಲ. ಅಂತಹ ಉತ್ತಮ ಪ್ರತಿಕ್ರಿಯೆ ನಮ್ಮ ಸಿನಿಮಾಗೆ ಧಾರವಾಡದಲ್ಲಿ ಸಿಕ್ಕಿದೆ. ಇಂತಹ ಅಭೂತಪೂರ್ವ ಸ್ಪಂದನೆಗೆ ನಾವು ಚಿರ ಋಣಿಯಾಗಿದ್ದೇವೆ ಎಂದು ಅಭಿನಂದನೆ ತಿಳಿಸಿದರು.